ಸದ್ಬಳಕೆಯಾಗದ ಜಮೀನು ಹಿಂಪಡೆಯಲು ಸರ್ಕಾರ ಚಿಂತನೆ

ಬೆಂಗಳೂರು/ಮೈಸೂರು: ಧಾರ್ಮಿಕ ಸಂಸ್ಥೆಗಳು ಮತ್ತು ಉದ್ದಿಮೆದಾರರಿಗೆ ಕೊಟ್ಟ ಸರ್ಕಾರಿ ಜಮೀನನ್ನು ನಿರ್ಧಿಷ್ಟ ಸಮಯದಲ್ಲಿ ಬಳಸಿಕೊಳ್ಳದಿದ್ದಲ್ಲಿ, ಅಂತಹ ಜಮೀನನ್ನು ಕರ್ನಾಟಕ ಸರ್ಕಾರ ಹಿಂತೆಗೆದುಕೊಳ್ಳಲು ಮುಂದಾಗಿದೆ.
ಈ ನಿಟ್ಟಿನಲ್ಲಿ ಸದರಿ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತರಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದ್ದು, ಬೆಳಗಾವಿಯಲ್ಲಿ ನಡೆಯುವ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸುವ ಸಾಧ್ಯತೆ ಇದೆ. ಅಲ್ಲದೆ ಬಳಕೆ ಮಾಡದ ಜಾಗವನ್ನು ಹಿಂತೆಗೆದುಕೊಳ್ಳಲು ಸರ್ಕಾರ ಯೋಜನೆ ರೂಪಿಸಿದೆ ಎನ್ನಲಾಗಿದೆ.
ಈ ಕಾಯಿದೆ ಸರ್ಕಾರಿ ಜಮೀನನ್ನು ಮಾರಾಟ ಮಾಡುವ ಯಾವುದೇ ಸಂಸ್ಥೆಗಳ ಮೇಲೆ ಸಂಪೂರ್ಣ ನಿರ್ಬಂಧ ಹೇರುತ್ತದೆ.
ಧಾರ್ಮಿಕ ಸಂಸ್ಥೆಗಳು ಮತ್ತು ಉದ್ದಿಮೆದಾರರು ಪಡೆದ ಜಮೀನನ್ನು ಸರ್ಕಾರಕ್ಕೆ ಮಾತ್ರ ಅವರು ಕೊಂಡ ಬೆಲೆಯಲ್ಲೇ ಮತ್ತೆ ಮಾರಬಹುದು ಎಂದು ಕಂದಾಯ ಸಚಿವ ವಿ ಶ್ರೀನಿವಾಸ ಪ್ರಸಾದ್ ತಿಳಿಸಿದ್ದಾರೆ.
ಈ ಮಸೂದೆಯಿಂದ ಸರ್ಕಾರಿ ಜಮೀನು ದುರ್ಬಳೆಕೆಯಾಗುವುದನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಕೂಡ ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
ನಾವು ಕೊಟ್ಟ ಜಾಗದಲ್ಲಿ ಯಾವುದೇ ಸಂಸ್ಥೆ ಯೋಜಿಸಿದಂತೆ ಅಭಿವೃದ್ಧಿ ಪಡಿಸಲು ನಾವು ೧೦ ವರ್ಷದ ಸಮಯವನ್ನು ಕೊಡುತ್ತಾ ಬಂದಿದ್ದೇವೆ, ಎಂದು ಅವರು ಹೇಳಿದರು.
೧೦ ವರ್ಷಗಳಲ್ಲಿ ಅವರು ರೂಪಿಸಿದ ಯೋಜನೆಯನ್ನು ಜಾರಿಗೊಳಿಸಲು ಸಾಧ್ಯವಾಗದೆ ಹೋದರೆ, ಅವರಿಗೆ ಜಾಗ ಕೊಡುವುದರಲ್ಲಿ ಅರ್ಥವೇನು? ಆದುದರಿಂದ ಅಂತಹ ಜಾಗವನ್ನು ನಾವು ಹಿಂದೆಗೆದುಕೊಳ್ಳುತ್ತೇವೆ ಮತ್ತು ಈ ಮಸೂದೆ ಎಲ್ಲ ವಿದ್ಯಾ ಸಂಸ್ಥೆಗಳಿಗೂ, ಸಾರ್ವಜನಿಕ, ಧಾರ್ಮಿಕ ಸಂಸ್ಥೆಗಳಿಗೂ ಅನ್ವಯವಾಗುತ್ತದೆ ಎಂದು ಶ್ರೀನಿವಾಸ ಪ್ರಸಾದ್ ತಿಳಿಸಿದ್ದಾರೆ. ಅಲ್ಲದೆ ಈ ರೀತಿ ಹಿಂಪಡೆದ ಜಾಗವನ್ನು ಬೇರೆ ಸಂಸ್ಥೆಗಳಿಗೆ ಅಥವಾ ಉದ್ದಿಮೆದಾರರಿಗೆ ಕೊಡುತ್ತೇವೆ ಎಂದಿದ್ದಾರೆ.
ಅದಲ್ಲದೆ, ಸರ್ಕಾರದ ಬಲ್ಲ ಮೂಲಗಳ ಪ್ರಕಾರ ಸಾವಿರಾರು ಎಕರೆ ಜಾಗ ಮೂಲ ಯೋಜನೆಗಳನ್ನು ಹೊರತುಪಡಿಸಿ ಬೇರೆ ಕಾರ್ಯಗಳಿಗೆ ದುರ್ಬಳಕೆಯಾಗಿದೆ ಎಂದು ತಿಳಿದು ಬಂದಿದೆ.
ಜನರು ಯಾವುದೋ ಉದ್ದಿಮೆಯನ್ನು ಪ್ರಾರಂಭಿಸಲು ಜಾಗ ಪಡೆದು, ಎರಡು ವರ್ಷದ ನಂತರ ಆ ಜಾಗವನ್ನು ದುಬಾರಿ ಬೆಲೆಗೆ ಮಾರುವುದೋ, ಅಥವಾ ರಿಯಲ್ ಎಸ್ಟೇಟ್ ಚಟುವಟಿಕೆಗಳನ್ನು ಪ್ರಾರಂಭಿಸಿ ಬಹುಮಹಡಿ ಕಟ್ಟಡಗಳನ್ನೊ, ವಿಲ್ಲಾಗಳನ್ನೊ, ವಿನೋದ ತಂಗುದಾಣಗಳನ್ನೋ ನಿರ್ಮಿಸಲು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಸರ್ಕಾರದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಈ ಮಸೂದೆ ಜಾರಿಯಾದರೆ ಇಂತಹ ಚಟುವಟಿಕೆಗಳಿಗೆ ತಡೆ ಬೀಳುವುದು ಖಂಡಿತ ಎಂದಿದ್ದಾರೆ.
ಇತ್ತೀಚಿಗೆ ಘೋಷಣೆಯಾದ ಹೊಸ ಕೈಗಾರಿಕಾ ಮಸೂದೆ ೨೦೧೪-೨೦೧೯, ರಲ್ಲಿ ಹೂಡಿಕೆದಾರರಿಗೆ ಜಮೀನನ್ನು ಮಾರದೆ, ಲೀಸ್ ರೂಪದಲ್ಲಿ ಕೊಡುವುದಾಗಿ ಮಸೂದೆ ರೂಪಿಸಿದ್ದು, ಕೊಟ್ಟ ಸಮಯದಲ್ಲಿ ಹೂಡಿಕೆದಾರರು ಆ ಜಾಗದಲ್ಲಿ ತಮ್ಮ ಚಟುವಟಿಕೆಗಳನ್ನು ಪ್ರಾರಂಭಿಸಲು ಅನುವಾಗುತ್ತದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


