ಉಗ್ರರ ನಂಟಿನ ವ್ಯಕ್ತಿಗೆ ಕೆಪಿಎಸ್ಸಿ ಅಧ್ಯಕ್ಷ ಗಾದಿ?

ಬೆಂಗಳೂರು: ಉಗ್ರರೊಂದಿಗೆ ನಂಟು ಹೊಂದಿರುವ ಆರೋಪ ಎದುರಿಸುತ್ತಿರವವರನ್ನು ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರನ್ನಾಗಿಸಲು ಸರ್ಕಾರ ಮುಂದಾಗಿದೆ.
ಮುಖ್ಯಮಂತ್ರಿಗಳ ಆಪ್ತರು ಎಂಬ ಕಾರಣಕ್ಕೆ ಈ ಆ ಆರೋಪ ಬದಿಗೊತ್ತಿ ಅವರನ್ನೇ ನೇಮಿಸಲು ಮುಂದಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಆಯೋಗದ ಅಧ್ಯಕ್ಷರ ನೇಮಕ ವಿಚಾರದಲ್ಲಿ ಮೈಸೂರು ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಪ್ರೊ.ಸೈಯದ್ ಅಖಿಲ್ ಅಹಮದ್ ಹೆಸರು ಮುಂಚೂಣಿಯಲ್ಲಿದೆ. ಸರ್ಕಾರ ಕೂಡ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಮುಂದಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ, ಅವರು ಈ ಹುದ್ದೆಗೆ ಅರ್ಹರೇ ಎಂಬ ಪ್ರಶ್ನೆಗಳು ಈಗ ಉದ್ಭವವಾಗಿವೆ.
ಏಕೆಂದರೆ, ಉಗ್ರರ ಜತೆ ಸೈಯದ್ ನಂಟು ಹೊಂದಿದ್ದಾರೆ ಎಂಬ ಆರೋಪವಿದೆ. ಇಂಥ ಆರೋಪಕ್ಕೆ ಇಂದಿಗೂ ಸೂಕ್ತ ಉತ್ತರ ದೊರೆತಿಲ್ಲ. ಅವರು ಆರೋಪದಿಂದ ಮುಕ್ತವಾಗಿಲ್ಲ. ಉಗ್ರರ ಜತೆ ನಂಟಿರುವುದು ರಾಜ್ಯ ಸರ್ಕಾರಕ್ಕೂ ಗೊತ್ತಿರುವ ವಿಷಯ ಹಾಗೂ ಅವರ ವಿರುದ್ಧ ತನಿಖೆ ನಡೆಯುತ್ತಿದೆ ಎಂಬ ಮಾಹಿತಿ ಇದ್ದರೂ ಅವರನ್ನು ರಾಜ್ಯದ ಉನ್ನತ ಹುದ್ದೆಯೊಂದಕ್ಕೆ ನೇಮಿಸಲು ಸರ್ಕಾರ ಮುಂದಾಗಿರುವುದು ಪ್ರಶ್ನಾರ್ಹ.
ಏನಿದು ಘಟನೆ?
ಸೈಯದ್ ಅಖಿಲ್ ಅಹಮದ್ ಅವರು 2006-2007ನೇ ಸಾಲಿನಲ್ಲಿ ರಸಾಯನ ಶಾಸ್ತ್ರ ವಿಭಾಗದ ಲ್ಯಾಬ್ ಅನ್ನು ಮೂವರು ಅಪರಿಚಿತರಿಗೆ ಬಿಟ್ಟುಕೊಟ್ಟಿದ್ದರು. ಆ ಮೂವರೂ ಕೇರಳದ ಉಗ್ರಗಾಮಿ ಸಂಘಟನೆಗೆ ಸೇರಿದವರೆನ್ನಲಾಗಿದ್ದು, ಸೈಯದ್ ಹಿಂದೆ ಕೆಎಫ್ಡಿ ಸಂಘಟನೆಯಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದ ಕಾರಣಕ್ಕೆ ಅವರಿಗೆ ತಮ್ಮ ಲ್ಯಾಬ್ ಬಿಟ್ಟುಕೊಟ್ಟಿದ್ದರು ಎನ್ನಲಾಗಿತ್ತು. ಅಲ್ಲದೇ ರಸಾಯನ ಶಾಸ್ತ್ರ ವಿಭಾಗದಿಂದ ಪಾಕಿಸ್ತಾನಕ್ಕೆ ಕರೆ ಹೋಗಿತ್ತು. ಈ ಎರಡೂ ಮಾಹಿತಿ ಆಧರಿಸಿ ತನಿಖಾಧಿಕಾರಿಗಳು ಸೈಯದ್ ಅವರಿಗೆ ನೋಟಿಸ್ ಜಾರಿ ಮಾಡಿದ್ದರು. ಇದಕ್ಕೆ ಸಮರ್ಪಕ ಉತ್ತರ ನೀಡದ ಸೈಯದ್ ಅವರು ಆಯಿಷಾ ಎಂಬ ಸಂಶೋಧನಾ ವಿದ್ಯಾರ್ಥಿಗೆ ಲ್ಯಾಬ್ ಬಳಸಿಕೊಳ್ಳಲು ಅವಕಾಶ ನೀಡಲಾಗಿತ್ತು ಎಂದು ತಿಳಿಸಿದ್ದರು. ಆದರೆ ಲ್ಯಾಬ್ ಅನ್ನು ಬಳಸಿದ್ದರು ಎನ್ನಲಾದ ಆ ಮೂವರು ಯಾರು ಎಂಬುದನ್ನು ಬಹಿರಂಗಪಡಿಸಿರಲಿಲ್ಲ. ಅದು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ.
ಮೂವರು ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂಬ ಬಗ್ಗೆ ಮಾತ್ರ ಮಾಹಿತಿ ಇದೆ ಎನ್ನಲಾಗಿದೆ. ಈ ನಡುವೆ ಆ ಲ್ಯಾಬ್ ಅನ್ನು ಸೈಯದ್ ಅವರು ಬೇರೆಯವರಿಗೆ ನೀಡಿರುವ ಬಗ್ಗೆ ಅಲ್ಲಿನ ವಿದ್ಯಾರ್ಥಿಗಳು ವಿವಿಗೆ ಪತ್ರ ಬರೆದಿದ್ದರು. ಈ ಸಂಬಂಧ ತನಿಖೆ ನಡೆಯುತ್ತಿದೆ.
ರಾಜ್ಯಪಾಲರಿಗೆ ಪತ್ರ: ಇಷ್ಟೆಲ್ಲ ಘಟನೆ ನಡೆದರೂ ಸೈಯದ್ ಈ ಬಗ್ಗೆ ಸ್ಪಷ್ಟ ಉತ್ತರ ನೀಡಿಲ್ಲ ಹಾಗೂ ಈ ವಿಚಾರ ಗೌಪ್ಯವಾಗಿಯೇ ಉಳಿದಿದೆ. ಈ ನಡುವೆ ಸೈಯದ್ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದು, 'ನಾನು ಮುಸ್ಲಿಂ ಎಂಬ ಕಾರಣಕ್ಕಾಗಿ ಈ ರೀತಿ ಆರೋಪ ಮಾಡಿದ್ದಾರೆ' ಎಂದು ವಿವಿ ಹಾಗೂ ಸಿಂಡಿಕೇಟ್ ಸದಸ್ಯರ ವಿರುದ್ಧ ಖಾರವಾಗಿ ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


