ಪ್ರಧಾನ ಸುದ್ದಿ

ಕಾಶ್ಮೀರ ಕಣಿವೇಲಿ ಮರಣ ಮೃದಂಗ

ಕಾಶ್ಮೀರ ಕಣಿವೇಲಿ ಮರಣ ಮೃದಂಗ
Published On :

ಶ್ರೀನಗರ/ಜಮ್ಮು: ಭಯಾನಕ ಜಲಪ್ರಳಯಕ್ಕೆ ಸಾಕ್ಷಿಯಾಗಿರುವ ಕಣಿವೆ ರಾಜ್ಯ ಅಕ್ಷರಶಃ ನಲುಗಿಹೋಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಮವಾರ ಮೃತರ ಸಂಖ್ಯೆ 200 ದಾಟಿದೆ.

ಇನ್ನೂ ಲಕ್ಷಾಂತರ ಮಂದಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದು, ಶ್ರೀನಗರದ ಬಹುತೇಕ ಭಾಗಗಳು ಮುಳುಗಡೆಯಾಗಿವೆ. ಇದರ ಜತೆಗೆ ಸಂವಹನ ಸಮಸ್ಯೆ ಹಾಗೂ ಏರುತ್ತಿರುವ ನೀರಿನ ಮಟ್ಟವು ರಕ್ಷಣಾ ಕಾರ್ಯಾಚರಣೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪರಿಸ್ಥಿತಿಯ ಭೀಕರತೆಯನ್ನು ಅರಿತ ನೌಕಾಪಡೆ ಮೊತ್ತಮೊದಲ ಬಾರಿಗೆ ಪ್ರವಾಹ ರಕ್ಷಣಾ ಕಾರ್ಯಾಚರಣೆಗಿಳಿದಿದೆ.

ನೈಸರ್ಗಿಕ ವಿಕೋಪದ ಸ್ಥಿತಿಯನ್ನು ನಿಭಾಯಿಸಲು ಸೇನೆ ಹರಸಾಹಸ ಪಡುತ್ತಿರುವ ನಡುವೆಯೇ ಸೋಮವಾರ ಉಧಾಂಪುರ ಜಿಲ್ಲೆಯ ಪಚೋರಿ ಗ್ರಾಮದಲ್ಲಿ ಭಾರಿ ಭೂಕುಸಿತ ಸಂಭವಿಸಿದೆ. ಕೆಲವರು ಅವಶೇಷಗಳಡಿ ಸಿಲುಕಿದ್ದು, ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ಶ್ರೀನಗರದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರ ರಕ್ಷಣೆಗಾಗಿ ಒಟ್ಟು 25 ದೋಣಿಗಳನ್ನು ನಿಯೋಜಿಸಲಾಗಿದೆ. ಇದೇ ವೇಳೆ, ಭಾರಿ ಪ್ರವಾಹದಿಂದಾಗಿ ಮೊಬೈಲ್, ಸ್ಥಿರ ದೂರವಾಣಿ, ಇಂಟರ್ನೆಟ್ ಸೇವೆ ಸಂಪೂರ್ಣ ಸ್ಥಗಿತಗೊಂಡಿದೆ. ಪರಿಣಾಮ ಸಂಕಷ್ಟದಲ್ಲಿರುವ ಕುಟುಂಬ ಸದಸ್ಯರನ್ನು ಸಂಪರ್ಕಿಸಲಾಗುತ್ತಿಲ್ಲ ಎಂಬ ಅಳಲು ಕೇಳಿಬಂದಿವೆ. ದುರಸ್ತಿ ಕಾರ್ಯ ಪೂರ್ಣಗೊಳ್ಳಲು ಇನ್ನೂ 3-5 ದಿನಗಳು ಬೇಕಾಗಬಹುದು ಎಂದು ಸರ್ಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ಮಾಹಿತಿ ನೀಡಿದೆ. ಈ ನಡುವೆ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗೆ ನೆರವಾಗಲೆಂದು ಸುಮಾರು 500 ರಷ್ಟು ಸ್ಯಾಟಲೈಟ್ ಫೋನ್‌ಗಳನ್ನು ಕಳುಹಿಸಿಕೊಡಲಾಗಿದೆ.

ಕಾಶ್ಮೀರ ಕಣಿವೆಗೆ ಸಂಪರ್ಕ ಕಡಿತ
ಭಾರಿ ಪ್ರವಾಹವು ಕಾಶ್ಮೀರ ಕಣಿವೆ ಹಾಗೂ ದೇಶದ ಇತರೆ ಭಾಗಗಳ ನಡುವಿನ ಸಂಪರ್ಕವನ್ನೇ ಕಡಿತಗೊಳಿಸಿದೆ. ಮೊಬೈಲ್ ಸೇವೆಯನ್ನು ಪುನರಾರಂಭಿಸಲು ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿ ಬಿಎಸ್ಸೆನ್ನೆಲ್ ಮತ್ತು ಸೇನೆಯು ನಿರಂತರವಾಗಿ ಶ್ರಮಿಸುತ್ತಿವೆ. ಇದಕ್ಕಾಗಿ ಬೆಂಗಳೂರು ಮತ್ತು ಹೈದರಾಬಾದ್‌ನ ಉಪಗ್ರಹ ಆಧರಿತ ಸೇವೆಗಳ ತಜ್ಞರ ನೆರವು ಪಡೆಯಲಾಗಿದೆ. ಬಿಎಸ್ಸೆನ್ನೆಲ್ ಮತ್ತು ಖಾಸಗಿ ಆಪರೇಟರ್‌ಗಳ ದೂರ ಸಂಪರ್ಕ ಮೂಲಸೌಕರ್ಯಕ್ಕೆ ಹಾನಿಯಾದ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿಯೇ ಮೊಬೈಲ್, ಸ್ಥಿರ ದೂರವಾಣಿ ಮತ್ತು ಇಂಟರ್ನೆಟ್ ಸೇವೆಸ್ಥಗಿತಗೊಂಡಿತ್ತು. ಸಂಪರ್ಕ ಸರಿಯಾಗಲು ಇನ್ನೂ 3-5 ದಿನಗಳುಬೇಕು ಸೋಮವಾರ ಬಿಎಸ್ಸೆನ್ನೆಲ್ ತಿಳಿಸಿದೆ.

ಜಮ್ಮು-ಕಾಶ್ಮೀರದಲ್ಲಿನ ಪ್ರವಾಹ ಪರಿಸ್ಥಿತಿಗೆ ಪ್ರಧಾನಿ ಶೀಘ್ರವಾಗಿ ಸ್ಪಂದಿಸಿದ್ದು ಸ್ವಾಗತಾರ್ಹವಾಗಿದೆ. ಇದರ ಜತೆಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಪರಿಸ್ಥಿತಿ ಬಗ್ಗೆ ಮೋದಿ ಸ್ಪಂದಿಸಿದ್ದು ಸರಿಯಾಗಿದೆ. ಸೇನೆ ಪೊಲೀಸ್, ನೈಸರ್ಗಿಕ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿ ಅಭೂತಪೂರ್ವವಾಗಿ ಕಾರ್ಯನಿರ್ವಹಿಸುತ್ತಿವೆ.
- ದಿಗ್ವಿಜಯ ಸಿಂಗ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.