ಗಡಿ ತಂಟೆಗೆ ಸುಪ್ರೀಂ ಸಮಿತಿ

ನವದೆಹಲಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಕುರಿತು ಉಭಯ ರಾಜ್ಯಗಳು ಮತ್ತು ಕೇಂದ್ರ ಸರ್ಕಾರ ಸಲ್ಲಿಸಿರುವ ಪ್ರಮಾಣ ಪತ್ರಗಳ ವಿಲೇವಾರಿಗೆ ನಿವೃತ್ತ ನ್ಯಾಯಮೂರ್ತಿ ಮನಮೋಹನ್ ಸರೀನ್ ನೇತೃತ್ವದಲ್ಲಿ ಸುಪ್ರೀಂಕೋರ್ಟ್ ಸಮಿತಿ ರಚಿಸಿದೆ.
ನಾಲ್ಕು ತಿಂಗಳಲ್ಲಿ ಪ್ರಮಾಣ ಪತ್ರಗಳ ಪರಾಮರ್ಶೆ ಪೂರ್ಣಗೊಳಿಸುವಂತೆಯೂ ನೂತನ ಸಮಿತಿಗೆ ಸೂಚಿಸಲಾಗಿದೆ.
ಅಲ್ಲದೆ ಗಡಿ ವಿವಾದಕ್ಕೆ ಸಂಬಂಧಿಸಿದಂತೆ, 2006 ಮಾರ್ಚ್ 15ರಂದು ಬೆಳಗಾವಿ ನಗರ ಮತ್ತು ಸುತ್ತಮುತ್ತಲ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಕೋರಿ ಅಲ್ಲಿನ ಸರ್ಕಾರ ಸಲ್ಲಿಸಿರುವ ಅರ್ಜಿಗೆ ಆಕ್ಷೇಪ ಸಲ್ಲಿಸಲು ಕರ್ನಾಟಕ ಮತ್ತು ಕೇಂದ್ರ ಸರ್ಕಾರಕ್ಕೆ ಎರಡು ತಿಂಗಳ ಕಾಲಾವಕಾಶ ನೀಡಿದೆ.
ಬೆಳಗಾವಿ ಮತ್ತು ಸುತ್ತಮುತ್ತಲ ಹಳ್ಳಿಗಳು ತನ್ನ ವ್ಯಾಪ್ತಿಗೆ ಬರಬೇಕೆಂದು ಮಹಾರಾಷ್ಟ್ರ ಸರ್ಕಾರ ಸಂವಿಧಾನದ ವಿಧಿ 131(ಬಿ) ಅಡಿಯಲ್ಲಿ ಹಾಕಿರುವ ತಗಾದೆಯು ಸಮರ್ಥನೀಯ ಅಲ್ಲ ಎಂದು ಕರ್ನಾಟಕ ಸರ್ಕಾರ ಎತ್ತಿರುವ ತಕರಾರಿಗೆ ಸಂಬಂಧಿಸಿದಂತೆ ಶುಕ್ರವಾರ ಮುಖ್ಯನ್ಯಾಯಮೂರ್ತಿ ಆರ್.ಎಂ ಲೋಧಾ, ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಮತ್ತು ನ್ಯಾಯಮೂರ್ತಿ ರೋಹಿಂಗ್ಟನ್ ನಾರಿಮನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತು.
ಕರ್ನಾಟಕ ಪರ ವಕೀಲರಾದ ಉದಯ್ ಹೊಳ್ಳ ಅವರು ಮಹಾರಾಷ್ಟ್ರ ಸರ್ಕಾರ 131(ಬಿ) ಅಡಿಯಲ್ಲಿ ಹಾಕಿರುವ ತಗಾದೆ ಸಮರ್ಥನೀಯವಲ್ಲ ಎಂದು ಪ್ರಶ್ನಿಸಿದ ಮುಖ್ಯನ್ಯಾಯಮೂರ್ತಿ ಆರ್.ಎಂ. ಲೋಧಾ ಅವರು, ಅಗತ್ಯ ಮಾಹಿತಿ ಕೇಳಿದರು. ಮಹಾರಾಷ್ಟ್ರ ಪರ ರಾಜು ರಾಮಚಂದ್ರನ್, ಕೇಂದ್ರ ಸರ್ಕಾರ ಪರ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ವಾದಿಸಿದರು.
ಮಹಾರಾಷ್ಟ್ರ ಸರ್ಕಾರದ ಮೂಲ ಅರ್ಜಿ ಸಮರ್ಥನೀಯವಲ್ಲ ಏಕೆ, ಅದಕ್ಕೆ ಇರುವ ಸಾಂವಿಧಾನಿಕ ಸಮರ್ಥನೆಗಳೇನು ಎನ್ನುವುದನ್ನು ಅಗತ್ಯ ದಾಖಲೆ ಮತ್ತು ಆಧಾರಗಳೊಂದಿಗೆ ಆಕ್ಷೇಪ ಎರಡು ತಿಂಗಳ ಒಳಗೆ ಸಲ್ಲಿಸಲು ನ್ಯಾಯಪೀಠವು ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.
ಮಹಾಜನ್ ಆಯೋಗ ಹೇಳಿದ್ದೇನು?
ಮಹಾರಾಷ್ಟ್ರ ಸರ್ಕಾರದ ಕೋರಿಕೆ ಮೇರೆಗೆ 1960ರಲ್ಲಿ ರಚಿಸಲಾದ ಮಹಾಜನ್ ಆಯೋಗವು ಬೆಳಗಾವಿ ಕರ್ನಾಟಕದಲ್ಲೇ ಮುಂದುವರಿಯಬೇಕು, ಜತ್ತ, ಅಕ್ಕಲಕೋಟೆ, ಸೊಲ್ಲಾಪುರ ಸೇರಿದಂತೆ 247 ಗ್ರಾಮ ಸ್ಥಳಗಳು ಕರ್ನಾಟಕಕ್ಕೆ ಸೇರಬೇಕು. ನಂದಗಡ, ನಿಪ್ಪಾಣಿ, ಖಾನಾಪುರ ಸೇರಿದಂತೆ 264 ಗ್ರಾಮ-ಸ್ಥಳಗಳು ಮಹಾರಾಷ್ಟ್ರಕ್ಕೆ ಸೇರಬೇಕು ಹಾಗೂ ಕಾಸರಗೋಡು ಕರ್ನಾಟಕದ ಭಾಗವಾಗಬೇಕು ಎಂದು ತನ್ನ ವರದಿಯಲ್ಲಿ ತಿಳಿಸಿತ್ತು. ಇದನ್ನು ಮಹಾರಾಷ್ಟ್ರ ಮತ್ತು ಕೇರಳ ತಿರಸ್ಕರಿಸಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


