ಡಿವಿಎಸ್ ಪುತ್ರನಿಗೆ 'ವಿಐಪಿ ವಿಚಾರಣೆ'

ಬೆಂಗಳೂರು: ಕೇಂದ್ರ ರೇಲ್ವೆ ಸಚಿವ ಡಿ.ವಿ.ಸದಾನಂದಗೌಡ ಅವರ ಪುತ್ರ ಕಾರ್ತಿಗೌಡರ ವಂಚನೆ ಪ್ರಕರಣದಲ್ಲಿ ಪೊಲೀಸರು ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆ ಆರಂಭದಿಂದಲೂ ಹಲವು ಅನುಮಾನಗಳು ಮೂಡಿದ್ದವು. ನಿನ್ನೆ ಪೊಲೀಸರು ನಡೆಸಿದ ಕಾರ್ತಿಕ್ ಗೌಡರ 'ವಿಐಪಿ ವಿಚಾರಣೆ' ಸಹ ಈ ಅನುಮಾನಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ.
ನಟಿ ಮೈತ್ರಿಯಾ ಗೌಡ ಅವರು ಕಾರ್ತಿಕ್ ಗೌಡ ವಿರುದ್ಧ ಅತ್ಯಾಚಾರ, ಅಪಹರಣ ಮತ್ತು ವಂಚನೆ ಕೇಸ್ ದಾಖಲಿಸಿ 10 ದಿನಗಳು ಕಳೆದರೂ ಕಾರ್ತಿಕ್ ಗೌಡನನ್ನು ಬಂಧಿಸಿ, ವಿಚಾರಣೆ ನಡೆಸದ ಪೊಲೀಸರು, ಇದೀಗ ನಿರೀಕ್ಷಣಾ ಜಾಮೀನಿನೊಂದಿಗೆ ವಿಚಾರಣೆ ಹಾಜರಾಗಿದ್ದ ರೇಲ್ವೆ ಸಚಿವರ ಪುತ್ರನಿಗೆ ವಿಐಪಿ ಆತಿಥ್ಯ ನೀಡಿದ್ದಾರೆ. ಅಲ್ಲದೆ ಆತನಿಗೆ ಮಾಧ್ಯಮದಿಂದ ಕಣ್ತಪ್ಪಿಸಿಕೊಳ್ಳಲು ಬೇಕಾದ ಎಲ್ಲಾ ರೀತಿಯ ಸಹಕಾರ ಸಹ ನೀಡಿದ್ದಾರೆ.
ಪ್ರಕರಣ ಸಂಬಂಧ ಕಳೆದ 12 ದಿನಗಳಿಂದ ತಲೆಮರೆಸಿಕೊಂಡಿದ್ದ ಕಾರ್ತಿಕ್ ಗೌಡ್ ನಿನ್ನೆ ಬೆಳಗ್ಗೆ 6.30ರ ಸುಮಾರಿಗೆ ದಿಢೀರ್ ಆರ್.ಟಿ.ನಗರ ಪೊಲೀಸರ ಮುಂದೆ ಹಾಜರಾಗಿದ್ದರು. ಸಾಮಾನ್ಯವಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಠಾಣೆಗೆ ಆಗಮಿಸುವುದು 10 ಗಂಟೆಗೆ. ಆದರೆ ಇದು ವಿಐಪಿ ಪ್ರಕರಣವಾಗಿದ್ದರಿಂದ ವಿಷಯ ತಿಳಿದ ಕೂಡಲೇ ಅಂದರೆ ಬೆಳಗಿನ ಜಾವ 7.15ಕ್ಕೆ ಎಸಿಪಿ ಎಚ್.ಎಂ ಓಂಕಾರಯ್ಯ ಅವರು ಠಾಣೆಗೆ ಆಗಮಿಸಿ, ಕೆಲ ಕಾಲ ತಮ್ಮ ಕಚೇರಿಯಲ್ಲೇ ವಿಚಾರಣೆ ನಡೆಸಿ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದರು. ಬಳಿಕ ಅವರನ್ನು ವೈದ್ಯಕೀಯ ಪರೀಕ್ಷೆಗೆಂದು ಅಂಬೇಡ್ಕರ್ ಆಸ್ಪತ್ರೆಗೆ ಕರೆದೊಯ್ದರು. ಬಹುಶಃ ಎಸಿಪಿ ಓಂಕಾರಯ್ಯ ಅವರಿಗೆ ಕಾರ್ತಿಕ್‌ಗೌಡ್ ವಿಚಾರಣೆಗೆ ಬರುವ ಬಗ್ಗೆ ಮೊದಲೇ ತಿಳಿದಿತ್ತು ಅಂತ ಕಾಣಿಸುತ್ತೆ.
ವೈದ್ಯಕೀಯ ಪರೀಕ್ಷೆಯ ಬಳಿಕ, ಅಂದರೆ 9 ಗಂಟೆಗೆ ಸುಮಾರಿಗೆ ಕಾರ್ತಿಕ್‌ನನ್ನು ಮನೆಗೆ ಕಳುಹಿಸಿಕೊಡಲಾಗಿತ್ತು. ಬಳಿಕ ಮಧ್ಯಾಹ್ನ 12 ಗಂಟೆಗೆ ಆಗಮಿಸಿದ ಕಾರ್ತಿಕ್‌ನನ್ನು ಪೊಲೀಸರು ಮಡಿವಾಳದ ಕೆಎಸ್‌ಆರ್‌ಪಿ ನಿರೀಕ್ಷಣಾ ಮಂದಿರಕ್ಕೆ ಕರೆದೊಯ್ದು, ಅಲ್ಲಿ ಎಸಿಪಿ ಓಂಕಾರಯ್ಯ ನೇತೃತ್ವದ ತಂಡ ಕಾರ್ತಿಕ್‌ಗೌಡ ಅವರನ್ನು ತುಂಬಾ ಫ್ರೆಂಡ್ಲಿಯಾಗಿ ವಿಚಾರಣೆಗೆ ಒಳಪಡಿಸಲಾಯಿತು ಎನ್ನಲಾಗಿದೆ. ಅಲ್ಲದೆ ಕಾರ್ತಿಕ್‌ಗೆ ವಿಐಪಿ ಮರ್ಯಾದೆ ಸಹ ನೀಡಲಾಗಿದ್ದು, ಈ ಬಗ್ಗೆ ಸ್ವತಃ ಬೆಂಗಳೂರು ಪೊಲೀಸ ಆಯುಕ್ತ ಎಂ.ಎನ್.ರೆಡ್ಡಿ ಅವರೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸುಮಾರು 11 ಗಂಟೆಯ ಸುಮಾರಿಗೆ ಎಂ.ಎನ್.ರೆಡ್ಡಿ ಅವರು ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಮತ್ತು ಜಂಟಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರೊಂದಿಗೆ ತಮ್ಮ ಕಚೇರಿಯಲ್ಲೆ ಸಭೆ ನಡೆಸಿ, ಆರ್.ಟಿ.ನಗರ ಪೊಲೀಸರ ಫ್ರೆಂಡ್ಲಿ ವಿಚಾರಣೆಯ ಬಗ್ಗೆ ಚರ್ಚಿಸಿದರು ಎಂದು ಉನ್ನತ ಮೂಲಗಳು ತಿಳಿಸಿವೆ.
ಸಭೆಯ ಬಳಿಕ ಎಂ.ಎನ್.ರೆಡ್ಡಿ ಅವರು ಪ್ರಕರಣದ ತನಿಖೆಯ ನೇತೃತ್ವ ವಹಿಸಿರುವ ಡಿಸಿಪಿ ಟಿ.ಸುರೇಶ್ ಕುಮಾರ್ ಅವರಿಗೆ ಕರೆ ಮಾಡಿ, ನೀವು ಕಾರ್ತಿಕ್ ಅವರಿಗೆ ಪೊಲೀಸ್ ಠಾಣೆಯಲ್ಲಿ ವಿಐಪಿ ಟ್ರೀಟ್‌ಮೆಂಟ್ ಏಕೆ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಅಲ್ಲದೆ ಆ ಬಗ್ಗೆ ನಮಗೆ ವರದಿ ಬಂದಿದ್ದು, ತನಿಖಾ ಅಧಿಕಾರಿ ಮತ್ತು ಇತರರು ಕಾರ್ತಿಕ್ ಗೆ ವಿಐಪಿ ಮರ್ಯಾದೆ ನೀಡುತ್ತಿರುವುದು ಸರಿಯಲ್ಲ ಎಂದರು.
'ಆತನನ್ನು ಬಂಧಿಸುವಲ್ಲಿ ಪೊಲೀಸರು ವಿಫಲವಾಗಿರುವುದಕ್ಕೆ ನಾವು ಈಗಾಗಲೇ ಹಲವು ಟೀಕೆಗಳನ್ನು ಎದುರಿಸುತ್ತಿದ್ದೇವೆ. ಅಷ್ಟು ಬೇಗ ಕಾರ್ತಿಕ್ ಅವರನ್ನು ಮನೆಗೆ ಹೋಗಲು ತನಿಖಾಧಿಕಾರಿ ಬಿಟ್ಟಿದ್ದೇಕೆ' ಎಂದು ರೆಡ್ಡಿ ಪ್ರಶ್ನಿಸಿದರು ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


