ಸುಗಮವಲ್ಲ ನಿಗಮ: ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ 20-20 ಸೂತ್ರ?

ಬೆಂಗಳೂರು: ನಿಗಮ-ಮಂಡಳಿ ನೇಮಕ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ನಡುವಿನ ಮೊದಲ ಸಭೆಯೇ ಮುರಿದುಬಿದ್ದಿದ್ದು, ನವರಾತ್ರಿ ಕಳೆಯುವವರೆಗೆ ಈ ಪ್ರಕ್ರಿಯೆ ನಡೆಯುವ ಸಾಧ್ಯತೆ ಕ್ಷೀಣವಾಗಿದೆ.
ಇದ್ದಕ್ಕಿದ್ದಂತೆ ನಿಮಗ-ಮಂಡಳಿ ಆಯ್ಕೆ ಪ್ರಕ್ರಿಯೆಗೆ ಜೀವ ನೀಡಲು ಮುಂದಾಗಿದ್ದ ಸಿದ್ದರಾಮಯ್ಯ, ಪರಮೇಶ್ವರ ಅವರನ್ನು ಚರ್ಚೆಗೆ ಕರೆದಿದ್ದರು. ನಗರದ ಖಾಸಗಿ ಹೋಟೆಲ್ನಲ್ಲಿ ಸೋಮವಾರ ಬೆಳಗ್ಗೆ ಸುಮಾರು ಅರ್ಧಗಂಟೆ ಕಾಲ ನಡೆದ ಈ ಚರ್ಚೆ ಫಲಿತಾಂಶ ಸೃಷ್ಟಿಸುವಲ್ಲಿ ವಿಫಲವಾಗಿದೆ.
ಸಭೆ ಅತ್ಯಂತ ರಹಸ್ಯವಾಗಿರಬೇಕೆಂಬ ಕಾರಣಕ್ಕೆ ಸಿದ್ದರಾಮಯ್ಯ ಹಾಗೂ ಪರಮೇಶ್ವರ ಮಾತ್ರ ಚರ್ಚೆ ನಡೆಸಿದರು. ಮೂಲಗಳ ಪ್ರಕಾರ ಸಭೆ ಸುಲಲಿತವಾಗಿದ್ದರೂ ಒಪ್ಪಿತ ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ.
ಅಡ್ಡಿಯಾಗಿದ್ದೇನು?
ಕಾಂಗ್ರೆಸ್ ಮೂಲಗಳ ಪ್ರಕಾರ ಸಿಎಂ ಸಿದ್ದರಾಮಯ್ಯ ಹಾಗೂ ಪರಮೇಶ್ವರ ಸಭೆಗೆ ಹೋಗುವಾಗಲೇ ಎರಡು ಪಟ್ಟಿ ಸಿದ್ಧಪಡಿಸಿಕೊಂಡಿದ್ದರು. ಆದರೆ ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ನೀಡುವ ವಿಚಾರ ಮೊದಲೇ ಪ್ರಸ್ತಾಪವಾಗಿದ್ದರಿಂದ ಪಟ್ಟಿಯನ್ನು ಬಿಡಿಸುವ ಅವಕಾಶ ಇಬ್ಬರಿಗೂ ಒದಗಿ ಬರಲಿಲ್ಲ. ಶಾಸಕರು ಮತ್ತು ಕಾರ್ಯಕರ್ತರಿಗೆ 30:70ರ ಅನುಪಾತದಲ್ಲಿ ಅಧಿಕಾರ ಹಂಚಿಕೆ ಮಾಡುವಂತೆ ಹೈಕಮಾಂಡ್ ಪ್ರಸ್ತಾಪ ಮಾಡಿದೆ. ಆದರೆ ಯಾವ ಶಾಸಕರಿಗೆ ಅಧಿಕಾರ ನೀಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಆಯಕಟ್ಟಿನ ಸ್ಥಳಗಳು ಕಾರ್ಯಕರ್ತರಿಗೇ ಸಿಗಬೇಕು. ಹತ್ತು ವರ್ಷಗಳ ನಂತರ ಪಕ್ಷ ಅಧಿಕಾರಕ್ಕೆ ಬಂದಿರುವುದರಿಂದ ಅವರಿಗೆ ಅಧಿಕಾರ ನೀಡಬೇಕು ಎಂದು ಪರಮೇಶ್ವರ ಪ್ರತಿಪಾದಿಸಿದರು.
ಕಾರ್ಯಕರ್ತರಿಗೆ ಅಧಿಕಾರ ನೀಡುವ ವಿಚಾರದಲ್ಲಿ ನನ್ನದೂ ವಿರೋಧವಿಲ್ಲ. ಆದರೆ ಶಾಸಕರಿಗೆ ಕೆಲ ಮಟ್ಟಿಗೆ ಅವಕಾಶ ಇರಬೇಕು ಎಂಬುದು ಸಿದ್ದರಾಮಯ್ಯ ಅವರ ವಾದವಾಗಿತ್ತು. ಅಷ್ಟು ಮಾತ್ರವಲ್ಲ ಅಧ್ಯಕ್ಷರು-ಉಪಾಧ್ಯಕ್ಷರ ಪಟ್ಟಿಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಒಪ್ಪಿಗೆ ಪಡೆಯುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಇಬ್ಬರೂ ಬಂದರು. ಹೀಗಾಗಿ ಉಭಯ ನಾಯಕರು ಸಿದ್ಧಪಡಿಸಿಕೊಂಡಿದ್ದ ಪಟ್ಟಿ ಖಾಸಗಿ ಹೋಟೆಲ್ನಲ್ಲೇ ಜೀವ ಕಳೆದುಕೊಂಡಿತು.
ಫ್ರೇಮ್ ವರ್ಕ್
ಜತೆಗೆ ಇಬ್ಬರೂ ಸೇರಿ ಫ್ರೇಮ್ವರ್ಕ್ ಮಾಡೋಣ ಎಂಬ ನಿರ್ಣಯವನ್ನು ಪರಮೇಶ್ವರ ಹಾಗೂ ಸಿದ್ದರಾಮಯ್ಯ ತೆಗೆದುಕೊಂಡಿದ್ದು, ಸೆ.20ರಂದು ಬೆಂಗಳೂರಿನಲ್ಲಿ ನಡೆಯುವ ಕಾಂಗ್ರೆಸ್ ಕಾರ್ಯಕಾರಣಿಯಲ್ಲಿ ಈ ಬಗ್ಗೆ ಸ್ಪಷ್ಟರೂಪ ದೊರಕಲಿದೆ ಎಂದು ತಿಳಿದು ಬಂದಿದೆ.
ನಿಮಗ-ಮಂಡಳಿಗೆ 20-20 ಸೂತ್ರ?
ನಿಮಗ-ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ 20-20 ಸೂತ್ರ ಅನುಸರಿಸಲು ಸರ್ಕಾರ ನಿರ್ಧರಿಸಿದೆ. ಈ ಹುದ್ದೆಗೆ 10 ಸಾವಿಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಅಧ್ಯಕ್ಷ, ಉಪಾಧ್ಯಕ್ಷ ನಿರ್ದೇಶರು ಹಾಗೂ ಸದಸ್ಯರು ಸೇರಿ 1000 ಮಂದಿಗೆ ಅಧಿಕಾರ ಹಂಚಬಹುದು. ಆಗ ಉಳಿದವರು ಅಸಂತುಷ್ಟರಾಗುತ್ತಾರೆ. ಹೀಗಾಗಿ ಅಸಮಾಧನದ ಪ್ರಮಾಣವನ್ನು ಇಳಿಕೆ ಮಾಡಲು ಅಧಿಕಾರವಧಿಯನ್ನು ತಲಾ 20 ತಿಂಗಳು ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ಹೀಗಾಗಿ ಎರಡು ಬಾರಿ ಈ ಸ್ಥಾನಗಳಿಗೆ ನೇಮಕ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


