ಪ್ರಧಾನ ಸುದ್ದಿ

ಮಂಗಳನೆಡೆ 'ಭಾರತಯಾನ'ದ ದಿನಗಣನೆ

ಮಂಗಳನೆಡೆ 'ಭಾರತಯಾನ'ದ ದಿನಗಣನೆ
Published On :

ಬೆಂಗಳೂರು: ಭಾರತದ ಹೆಮ್ಮೆಯ ಮಂಗಳ ಅಂತರಿಕ್ಷಯಾನದ ಮೊದಲ ಚಿತ್ರವು ಸೆ.24ರಂದು ಮಧ್ಯಾಹ್ನದ ವೇಳೆಗೆ ಭೂಮಿ ತಲುಪಲಿದೆ. ಇದರೊಂದಿಗೆ ಮಂಗಳಯಾನದಲ್ಲಿ ಯಶಸ್ವಿಯಾಗಿರುವ ವಿಶ್ವದ ಕೇವಲ ಮೂರು ಸಂಸ್ಥೆಗಳ ಸಾಲಿನಲ್ಲಿ ಭಾರತದ ಇಸ್ರೋ ನಾಲ್ಕನೇ ಸಂಸ್ಥೆಯಾಗಿ ಸೇರಲಿದೆ. ಹಾಗೆಯೇ ಏಷ್ಯಾದಲ್ಲಿ ಈ ಉಪಕ್ರಮ ಸಾಧಿಸುತ್ತಿರುವ ಮೊದಲ ದೇಶ ಭಾರತ. ಮತ್ತೊಂದು ವಿಶೇಷವೆಂದರೆ ಮೊದಲ ಪ್ರಯತ್ನದಲಿಯೇ ಯಶಗಳಿಸುವ ಹೆಗ್ಗಳಿಕೆಯನ್ನು ಭಾರತೀಯ ವಿಜ್ಞಾನಿಗಳು ಹೊಂದಲಿದ್ದಾರೆ.

2013ರ ನವೆಂಬರ್ 5ರಂದು ಶ್ರೀಹರಿಕೋಟಾದಿಂದ ಪಿಎಸ್‌ಎಲ್‌ವಿಯಿಂದ ಉಡಾವಣೆಯಾದ ಮಂಗಳ ಅಂತರಿಕ್ಷ ನೌಕೆಯ ಯಾನ 301 ದಿನಗಳನ್ನು ಕಳೆದಿದೆ. ಈಗಾಗಲೇ ಮಂಗಳ ಗ್ರಹದ ಕಕ್ಷೆಯ ಸಮೀಪವಿರುವ ಭಾರತದ ಅಂತರಿಕ್ಷ ನೌಕೆಯ ಯಾನ 301 ದಿನಗಳನ್ನು ಕಳೆದಿದೆ. ಈಗಾಗಲೇ ಮಂಗಳ ಗ್ರಹದ ಕಕ್ಷೆಯ ಸಮೀಪವಿರುವ ಭಾರತದ ಅಂತರಿಕ್ಷ ನೌಕೆಯು ಸೆ.24ರಂದು ಬೆಳಗ್ಗೆ 7 ಗಂಟೆ 30 ನಿಮಿಷ 2 ಸೆಕೆಂಡ್‌ಗೆ ಮಂಗಳ ಗ್ರಹದ ಕಕ್ಷೆಗೆ ಸೇರಲಿದೆ. ಭಾರತದ ಒಂದು ದಶಕದ ಹಿಂದಿನ ಕನಸು ನನಸಾಗುವ ಕ್ಷಣ ಬರಲಿದೆ. ಉಡಾವಣೆ ಬಳಿಕದ 309 ದಿನಗಳ ವಿಜ್ಞಾನಿಗಳ ಅಂತರಿಕ್ಷ ಯಜ್ಞಕ್ಕೆ ಫಲ ಸಿಗಲಿದೆ.

ಇಸ್ರೋ ವಿಜ್ಞಾನಿಗಳು ಹೇಳುವ ಪ್ರಕಾರ ಈಗಾಗಲೇ ನೌಕೆಯ ಶೇ.98ರಷ್ಟು ಯಾನ ಪೂರ್ಣಗೊಂಡಿದೆ. ಆದರೆ ಯಶಸ್ವಿಯಾದೆವು ಎಂದು ನಿರಾಳರಾಗುವಂತಿಲ್ಲ. ಸೆ.22ರಂದು ಲ್ಯಾಮ್ ಪರೀಕ್ಷೆ ನಡೆಯಲಿದ್ದು, ಯಶಸ್ವಿಯಾದರೆ ಸೆ.24ರಂದು ವಿಶ್ವಕ್ಕೆ ಭಾರತವು ದಿಟ್ಟ ಸಂದೇಶ ರವಾನೆ ಮಾಡಲಿದೆ.

ಭಾರತದ ಪ್ರತಿಷ್ಠೆಯ ಸಂಕೇತವಾಗಿರುವ ಈ ಮಂಗಳಯಾನದ ಸಂಪೂರ್ಣ ನಿರ್ವಹಣೆ ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ಕೇಂದ್ರದಿಂದ ನಡೆಯುತ್ತಿದೆ. ಹಾಗೆಯೇ ಬ್ಯಾಲಾಳುನಲ್ಲಿರುವ ಐಎಸ್‌ಡಿಎನ್ ಕೇಂದ್ರದಿಂದ ಸಂದೇಶ ರವಾನೆ ಹಾಗೂ ಸ್ವೀಕೃತಿಯಾಗುತ್ತಿದೆ. ಜತಗೆ ಅಮೆರಿಕದ ಗೋಲ್ಡ್‌ಸ್ಟೋನ್, ಸ್ಪೇನ್‌ನ ಮ್ಯಾಡ್ರಿಡ್ ಹಾಗೂ ಆಸ್ಟ್ರೇಲಿಯಾದ ಕ್ಯಾನ್‌ಬೆರಾದಿಂದ ನೌಕೆಯ ಚಲನೆಯನ್ನು ಪರಿಶೀಲಿಸಲಾಗುತ್ತಿದೆ.

ಮಾಹಿತಿ ಸ್ವೀಕೃತ ಕೇಂದ್ರ: ಬೆಂಗಳೂರಿನ ಹೊರವಲಯದ ಬ್ಯಾಲಾಳುವಿನಲ್ಲಿರುವ ಐಎಸ್‌ಡಿಎನ್ ಕೇಂದ್ರವು ಮಂಗಳ ಗ್ರಹದಿಂದ ಮಾಹಿತಿ ಸ್ವೀಕಾರಕ್ಕೆ ಸರ್ವಸನ್ನದ್ಧವಾಗಿದೆ. ಈಗಾಗಲೇ ಅಲ್ಲಿರುವ ಐಎಸ್‌ಡಿಎನ್-32 ವಾಹಕಯಂತ್ರದಿಂದ ಮಂಗಳಯಾನ ನೌಕೆಯಿಂದ ಸಂದೇಶ ಪಡೆಯಲಾಗುತ್ತಿದೆ. ಹಾಗೆಯೇ ನೌಕೆಯನ್ನು ಪರಿಶೀಲಿಸಲಾಗುತ್ತಿದೆ.

ಮಂಗಳ ಮುಹೂರ್ತಕ್ಕೆ ಪ್ರಧಾನಿ?
ಮಂಗಳ ಗ್ರಹದ ಕಕ್ಷೆಗೆ ಸೆ.24ರಂದು ಸ್ವದೇಶಿ ನಿರ್ಮಿತ ನೌಕೆಯ ಪ್ರವೇಶಿಸುವ ಮಂಗಳ ಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಸಾಕ್ಷಿಯಾಗುವ ಸಾಧ್ಯತೆಯಿದೆ. ಇದೆ ಕಾರಣದಿಂದ ಫುಡ್ ಪಾರ್ಕ್ ಶಂಕು ಸ್ಥಾಪನೆಗೆ ಸೆ.24ರಂದು ತುಮಕೂರಿಗೆ ಪ್ರಧಾನಿ ಬರುತ್ತಿದ್ದಾರೆ ಎನ್ನಲಾಗಿದೆ.

ಸೆ.22ಕ್ಕೆ ಪೂರ್ವ ತಯಾರಿ ಪರೀಕ್ಷೆ
ಸೆ.24ರಂದು ನಡೆಯಬೇಕಿರುವ ಐತಿಹಾಸಿಕ ಕ್ಷಣಕ್ಕೆ ಎರಡು ದಿನದ ಮುಂಚೆ ಮಧ್ಯಾಹ್ನ 2.30ಕ್ಕೆ ಲ್ಯಾಮ್ ಅನ್ನು ಪರೀಕ್ಷಾರ್ಥವಾಗಿ ಹೊತ್ತಿಸಲಾಗುತ್ತದೆ. ಕಳೆದ 10 ತಿಂಗಳಿಂದ ಈ ಲ್ಯಾಮ್ ವಿಶ್ರಾಂತ ಸ್ಥಿತಿಯಲ್ಲಿದೆ. ಆದಾಗ್ಯೂ 440 ನ್ಯೂಟನ್ ಶಕ್ತಿ ಹೊಂದಿರುವ ಈ ಎಂಜಿನ್‌ನ್ನು ಸೆ.22ರಂದು 3.968 ಸೆಕೆಂಡ್‌ಗಳ ಕಾಲ 0.567ಕೆಜೆ ಇಂಧನ ಬಳಸಿಕೊಂಡು ಉರಿಸಲು ವಿಜ್ಞಾನಿಗಳು ನಿರ್ಧರಿಸಿದ್ದಾರೆ. ಒಂದೊಮ್ಮೆ ಈ ಲ್ಯಾಮ್ ಕಾರ್ಯನಿರ್ವಹಿಸದಿದ್ದರೆ, ಅದರ ಸುತ್ತಲಿರುವ 8 ಸಣ್ಣ ಎಂಜಿನ್‌ಗಳನ್ನು ಉರಿಸಲಾಗುತ್ತದೆ. ಇದನ್ನು ಇಸ್ರೋ ವಿಜ್ಞಾನಿಗಳು ಪ್ಲ್ಯಾನ್-ಬಿ ಎಂದಿರಿಸಿಕೊಂಡಿದ್ದಾರೆ. ಆದರೆ ಮೊದಲ ಹಂತದಲ್ಲಿಯೇ ಯಶಸ್ವಿಯಾಗುವ ವಿಶ್ವಾಸವನ್ನು ಇಸ್ರೋ ವೈಜ್ಞಾನಿಕ ಕಾರ್ಯದರ್ಶಿ ಕೋಟೇಶ್ವರ ರಾವ್ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.