ಪ್ರಧಾನ ಸುದ್ದಿ

ಏಷ್ಯಾ ಕಲಿಗಳ ಕಾದಾಟ

ಏಷ್ಯಾ ಕಲಿಗಳ ಕಾದಾಟ
Published On :

ವಿಶ್ವದಲ್ಲೇ ಉನ್ನತ ಕ್ರೀಡಾ ಸ್ಫೂರ್ತಿ ಹೊಂದಿರುವ ರಾಷ್ಟ್ರಗಳಲ್ಲೊಂದಾದ ಆಸ್ಟ್ರೇಲಿಯಾ ತಾನೂ ಭಾಗವಹಿಸಬೇಕು ಎಂದು ಆಸೆಗಣ್ಣಿನಿಂದ ನೋಡುವಂತಹ ಕ್ರೀಡಾಕೂಟವೆಂದರೆ ಅದು ಏಷ್ಯನ್ ಗೇಮ್ಸ್. ಏಷ್ಯಾಡ್ ಎಂದು ಸಹ ಕರೆಯಲ್ಪಡುವ ಮತ್ತು ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಏಷ್ಯನ್ ಕ್ರೀಡಾಕೂಟ ಏಷ್ಯಾದ ಅಥ್ಲೀಟ್‌ಗಳ ನಡುವೆ ಮಾತ್ರ ನಡೆಯುತ್ತದೆ. ಮೊಟ್ಟ ಮೊದಲ ಬಾರಿಗೆ 1951ರಲ್ಲಿ ರಾಜಧಾನಿ ದೆಹಲಿಯಲ್ಲಿ ಕ್ರೀಡಾಕೂಟ ನಡೆದಾಗಿನಿಂದ 1978ರವರೆಗೆ ಇದು ಏಷ್ಯನ್ ಗೇಮ್ಸ್ ಫೆಡರೇಷನ್ ಅಡಿಯಲ್ಲಿ ಆಯೋಜನೆಗೊಳ್ಳುತ್ತಿತ್ತು. ಆದರೆ, 1982ರಿಂದ ಈ ಕ್ರೀಡಾಕೂಟವನ್ನು ಏಷ್ಯಾ ಒಲಿಂಪಿಕ್ಸ್ ಮಂಡಳಿ ಆಯೋಜಿಸುತ್ತಿದ್ದು, ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯಿಂದ ಮಾನ್ಯತೆಯನ್ನೂ ಪಡೆದುಕೊಂಡಿದೆ.

ಅಲ್ಲದೇ, ಒಲಿಂಪಿಕ್ಸ್ ಕ್ರೀಡಾಕೂಟದ ನಂತರ ವಿಶ್ವದ 2ನೇ ಅತಿ ದೊಡ್ಡ ಕ್ರೀಡಾಕೂಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೇ ಸೆಪ್ಟೆಂಬರ್ 19ರಿಂದ ಅಕ್ಟೋಬರ್ 4ರವರೆಗೆ ದಕ್ಷಿಣ ಕೊರಿಯಾ ಇಂಚಾನ್‌ನಲ್ಲಿ 17ನೇ ಏಷ್ಯನ್ ಕ್ರೀಡಾಕೂಟ ನಡೆಯುವ ಹಿನ್ನೆಲೆಯಲ್ಲಿ ಆ ಬಗ್ಗೆ ಒಂದಿಷ್ಟು ಮಾಹಿತಿ.

ಇತಿಹಾಸ
ಏಷ್ಯನ್ ಗೇಮ್ಸ್ ಎಂದು ನಾಮಕರಣಗೊಳ್ಳುವ ಮುನ್ನ 1912ರಿಂದಲೇ ಈ ಕ್ರೀಡಾಕೂಟ ನಡೆಯುತ್ತಿತ್ತು. ಆದರೆ, ಆಗ ಇದನ್ನು ಫಾರ್ ಈಸ್ಟರ್ನ್ ಗೇಮ್ಸ್ ಎಂದು ಕರೆಯಲಾಗುತ್ತಿತ್ತು. 1913ರಲ್ಲಿ ಮನಿಲಾದಲ್ಲಿ ಮೊದಲ ಬಾರಿಗೆ ಈ ಕ್ರೀಡಾಕೂಟ ನಡೆದಿತ್ತು. 1934ಕ್ಕಿಂತ ಮೊದಲು ಒಟ್ಟು 10 ಕ್ರೀಡಾಕೂಟಗಳು ನಡೆದವು. ಆದರೆ, 1934ರಲ್ಲಿ ಜಪಾನ್ ಯುದ್ಧಕ್ಕೆ ಇಳಿದ ಹಿನ್ನೆಲೆಯಲ್ಲಿ ಫಾರ್ ಈಸ್ಟರ್ನ್ ಗೇಮ್ಸ್ ಕ್ರೀಡಾಕೂಟ ಆಯೋಜನೆಗೊಳ್ಳಲಿಲ್ಲ. ಮುಂದೆ ಚೀನಾ ಸಹ ಕ್ರೀಡಾಕೂಟದಿಂದ ಹಿಂದೆ ಸರಿಯಿತು. ಹೀಗಾಗಿ 1938ರಲ್ಲಿ ಕ್ರೀಡಾಕೂಟವನ್ನು ರದ್ದುಗೊಳಿಸಲಾಯಿತು.

ಆರಂಭವಾಗಿದ್ದು ಹೇಗೆ
ಎರಡನೇ ಮಹಾ ಯುದ್ಧದ ನಂತರ ಏಷ್ಯಾದ ಹಲವಾರು ರಾಷ್ಟ್ರಗಳು ಸ್ವತಂತ್ರಗೊಂಡಿದ್ದವು. ಹೀಗಾಗಿ ಹೆಚ್ಚಿನ ಏಷ್ಯಾ ರಾಷ್ಟ್ರಗಳಿಗೆ ಹೊಸ ಮಾದರಿಯ ಕ್ರೀಡಾಕೂಟ ಆಯೋಜಿಸುವ ಇರಾದೆಯನ್ನು ತೋರಿದವು. ಇದರಲ್ಲಿ ಏಷ್ಯಾ ಎಂಬ ಒಗ್ಗಟ್ಟಿನ ಮಂತ್ರವಿರಲಿಲ್ಲ. ಬದಲಾಗಿ ಎಲ್ಲ ರಾಷ್ಟ್ರಗಳು ಪರಸ್ಪರ ಹೊಂದಾಣಿಕೆಯ ಮೂಲಕವೇ ಕ್ರೀಡಾಕೂಟ ಆಯೋಜಿಸಲು ಸಮ್ಮತಿಸಿದ್ದವು.

1948ರ ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಚೀನಾ ಮತ್ತು ಫಿಲಿಪಿನ್ಸ್ ದೇಶಗಳ ಅಥ್ಲೀಟ್‌ಗಳು ಫಾರ್ ಈಸ್ಟರ್ನ್ ಗೇಮ್ಸ್ ಮರು ಆಯೋಜಿಸಲು ಮಾತುಕತೆ ನಡೆಸಿದರು. ಆದರೆ, ಈ ಕ್ರೀಡಾಕೂಟ ಮರು ಆಯೋಜನೆ ಮಾಡಲು ತಕ್ಕ ಸ್ಫೂರ್ತಿ ಮತ್ತು ಛಲ ಏಷ್ಯನ್ ರಾಷ್ಟ್ರಗಳಲ್ಲಿದೆ ಎಂಬುದರಲ್ಲಿ. ಆಗ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯನ್ನು ಪ್ರತಿನಿಧಿಸಿದ್ದ ಭಾರತದ ಗುರುದತ್ ಸೋಂಧಿ ಅವರಿಗೆ ನಂಬಿಕೆ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ನೂತನ ಕ್ರೀಡಾ ಸ್ಪರ್ಧೆಯೇ ಏಷ್ಯನ್ ಕ್ರೀಡಾಕೂಟ. ಹೀಗಾಗಿ ಏಷ್ಯನ್ ಗೇಮ್ಸ್ ಅಸ್ಥಿತ್ವಕ್ಕೆ ಬರುವಲ್ಲಿ ಭಾರತ ಮಹತ್ವದ ಪಾತ್ರ ವಹಿಸಿದೆ. ಹೊಸ ಕ್ರೀಡಾಕೂಟಕ್ಕೆ ಏಷ್ಯನ್ ಅಥ್ಲೆಟಿಕ್ಸ್ ಫೆಡರೇಷನ್ ಮೂಲಕ ಒಪ್ಪಂದ ಮಾಡಿಕೊಳ್ಳಲಾಯಿತು. ಸಮಿತಿಯೊಂದು ನೂತನ ಕ್ರೀಡಾಕೂಟದ ನಿಯಮಾವಳಿಗಳನ್ನು ರಚಿಸಿತು. 1949 ಫೆಬ್ರವರಿ 13ರಂದು ನವದೆಹಲಿಯಲ್ಲಿ ಏಷ್ಯನ್ ಅಥ್ಲೆಟಿಕ್ಸ್ ಫೆಡರೇಷನ್ ಅನ್ನು ಉದ್ಘಾಟಿಸಲಾಯಿತು. ಇದರೊಂದಿಗೆ ಮೊದಲ ಕ್ರೀಡಾಕೂಟವನ್ನು ದೆಹಲಿಯಲ್ಲಿ ನಡೆಸುವುದಾಗಿ ಘೋಷಿಸಲಾಯಿತು.

ಈ ಬಾರಿ 36 ಕ್ರೀಡೆಗಳಿಗೆ ಸೀಮಿತ
ಕಳೆದ ಬಾರಿ 2010ರಲ್ಲಿ ಚೀನಾದ ಗುವಾಂಗ್ಜೌನಲ್ಲಿ ನಡೆದ ಕ್ರೀಡಾಕೂಟದಲ್ಲಿ ಒಟ್ಟು 42 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದಿದ್ದವು. ಆದರೆ, ಈ ಬಾರಿ ದಕ್ಷಿಣ ಕೊರಿಯಾದ ಇಂಚಾನ್‌ನಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ಅದನ್ನು 36ಕ್ಕೆ ಸಮೀತಗೊಳಸಲಾಗಿದೆ. ಆದರೆ, ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಮಾತ್ರ ಕಡಿತಗೊಳಿಸಲಾಗಿಲ್ಲ. ಗುವಾಂಗ್ಜೌ ಕ್ರೀಡಾಕೂಟದಲ್ಲೂ 28 ಒಲಿಂಪಿಕ್ಸ್ ಸ್ಪರ್ಧೆಗಳು ನಡೆದಿದ್ದವು.
ಈಗ ಇಂಚಾನ್ ಕ್ರೀಡಾಕೂಟದಲ್ಲೂ 28 ಒಲಿಂಪಿಕ್ಸ್ ಸ್ಪರ್ಧೆಗಳು ನಡೆಯುತ್ತಿವೆ.

ಪಂದ್ಯಾವಳಿಯಲ್ಲಿ ಎದುರಾದ ಬಿಕ್ಕಟ್ಟು

ಆರಂಭದಲ್ಲಿ ಸುಗಮವಾಗಿ ನಡೆದ ಕ್ರೀಡಾಕೂಟದಲ್ಲಿ 1962ರಲ್ಲಿ ಮೊದಲ ಬಾರಿಗೆ ಬಿಕ್ಕಟ್ಟು ಕಾಣಿಸಿಕೊಂಡಿತು. ಆಗ ಕ್ರೀಡಾಕೂಟದ ಆತಿಥ್ಯವಹಿಸಿಕೊಂಡಿದ್ದ ಇಂಡೋನೇಷ್ಯಾ, ರಾಜಕೀಯ ಮತ್ತು ಧಾರ್ಮಿಕ ವಿವಾದದ ಹಿನ್ನೆಲೆಯಲ್ಲಿ ಇಸ್ರೇಲ್ ಮತ್ತು ಚೀನಾ ದೇಶಗಳು ಕ್ರೀಡಾಕೂಟದಲ್ಲಿ ಭಾಗವಹಿಸಲು ಅನುಮತಿ ನೀಡಲಿಲ್ಲ. ಹೀಗಾಗಿ ಐಓಸಿ ಕ್ರೀಡಾಕೂಟದಿಂದ ತನ್ನ ಪ್ರಯೋಜಕತ್ವ ಹಿಂಪಡೆಯಿತು. ಅಲ್ಲದೆ ಇಂಡೋನೇಷ್ಯಾವನ್ನು ಐಓಸಿ ಸದಸ್ಯತ್ವದಿಂದ ವಜಾಗೊಳಿಸಿತು. ಅಲ್ಲದೇ, ಹಲವಾರು ಕ್ರೀಡಾ ಫೆಡರೇಷ್‌ಗಳು ಕ್ರೀಡಾಕೂಟಕ್ಕೆ ನೀಡಿದ್ದ ಮಾನ್ಯತೆಯನ್ನು ರದ್ದು ಪಡಿಸಿದವು.

ನಂತರ 1970ರಲ್ಲಿ ದಕ್ಷಿಣ ಕೊರಿಯಾ ಮತ್ತು 1974ರಲ್ಲಿ ಪಾಕಿಸ್ತಾನ ದೇಶಗಳು ಕ್ರೀಡಾಕೂಟದ ಆತಿಥ್ಯ ದೊರಕಿದ್ದರೂ, ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಪಂದ್ಯಾವಳಿ ಆಯೋಜಿಸುವುದರಿಂದ ಹಿಂದೆ ಸರಿದವು.

ಆಗ 1970ರಲ್ಲಿ ಥಾಯ್ಲೆಂಡ್ ಮತ್ತು 74ರಲ್ಲಿ ಇರಾನ್ ಕ್ರೀಡಾಕೂಟವನ್ನು ನಡೆಸಿಕೊಟ್ಟಿದ್ದವು. ತದನಂತರ ಸಹ ರಾಜಕೀಯ, ಆರ್ಥಿಕ, ಧಾರ್ಮಿಕ ಹಾಗೂ ಭದ್ರತಾ ಕಾರಣಗಳು ಕೀಡಾಕೂಟಕ್ಕೆ ಅಡ್ಡಿಯಾಗಿವೆಯಾದರೂ, ಕ್ರೀಡಾಕೂಟ ಮಾತ್ರ ವಿಶ್ವಮಟ್ಟದಲ್ಲಿ ತನ್ನ ಗರಿಮೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.