ಪ್ರಧಾನ ಸುದ್ದಿ

ಸುವರ್ಣ ರಥಕ್ಕೆ ಸಿಎಂ ಉತ್ತೇಜನ

ಸುವರ್ಣ ರಥಕ್ಕೆ ಸಿಎಂ ಉತ್ತೇಜನ
Published On :

ಕ.ಪ್ರ ವಾರ್ತೆ, ಬೆಂಗಳೂರು -ಸೆ.24

ನಷ್ಟದಲ್ಲಿರುವ ಗೋಲ್ಡನ್ ಚಾರಿಯೇಟ್ ರೈಲಿಗೆ ಜೀವ ತುಂಬಲು ಸಿಎಂ ಸಿದ್ಧರಾಮಯ್ಯ ಬೆಂಗಳೂರಿನಿಂದ ಮೈಸೂರಿಗೆ ಸಚಿವ ಬಳಗದ ಜತೆ ಈ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೀಳ್ಕೊಟ್ಟ ನಂತರ ಯಶವಂತಪುರ ರೈಲು  ನಿಲ್ದಾಣದಿಂದ ಸಂಜೆ 5 ಗಂಟೆಗೆ ಅವರು ಗೋಲ್ಡನ್ ಚಾರಿಯೇಟ್‌ನಲ್ಲಿ ಮೈಸೂರಿಗೆ ತೆರಳಿದರಾದರೂ ಈ ಬಾರಿಯ ದಸರಾ ಉದ್ಘಾಟಕ ,ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಮಾತ್ರ ಸಿದ್ಧರಾಮಯ್ಯ ಅವರ ಜತೆ ತೆರಳಿಲ್ಲ.

ಸಿದ್ಧರಾಮಯ್ಯ ಅವರ ಜತೆಯಲ್ಲಿ  ಲೋಕೋಪಯೋಗಿ ಸಚಿವ ಡಾ.ಎಚ್.ಸಿ ಮಹದೇವಪ್ಪ, ಸಹಕಾರ ಸಚಿವ ಎಚ್.ಎಸ್. ಮಹಾದೇವಪ್ರಸಾದ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ, ವಸತಿ ಸಚಿವ ಅಂಬರೀಷ್, ಯುವಜನ  ಸೇವಾ ಇಲಾಖೆ ಸಚಿವ ಅಭಯಚಂದ್ರ ಜೈನ್, ಪ್ರವಾಸೋದ್ಯಮ ಸಚಿವ ಆರ್. ವಿ.ದೇಶಪಾಂಡೆ, ಗೃಹ ಸಚಿವ ಕೆ.ಜೆ ಜಾರ್ಜ್, ಅರಣ್ಯ ಸಚಿವ ರಮಾನಾಥ ರೈ, ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಸಹ ಪ್ರಯಾಣ ನಡೆಸಿದರು.

ಪ್ರೊಮೋಷನ್ ಟ್ರಿಪ್
: ಸರ್ಕಾರಿ ಮೂಲಗಳ ಪ್ರಕಾರ, ರೈಲು ಪ್ರಯಾಣ ಪೂರ್ವ ನಿಯೋಜಿತ ಕಾರ್ಯಕ್ರಮವಾಗಿರಲಿಲ್ಲ. ಆದರೆ ಪ್ರವಾಸೋದ್ಯಮ ಇಲಾಖೆಯ ಗೋಲ್ಡನ್ ಚಾರಿಯೇಟ್ ರೈಲು ನಷ್ಟದಲ್ಲಿದೆ.
ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯುವುದಕ್ಕೆ ಯೋಜನೆ ಆರಂಭಿಸಿದ್ದರೂ  ನಿರೀಕ್ಷಿತ ಯಶ ದೊರಕಿಲ್ಲ. ಪ್ರತಿ ವರ್ಷ ನಿರೀಕ್ಷಿತ ಗುರಿಯ ಶೇ. 5ರಿಂದ 10ರಷ್ಟು ಮಾತ್ರ ಪ್ರಗತಿ ಕಂಡಿತ್ತು. ಜತೆಗೆ ಪ್ರಚಾರದ ಕೊರತೆ ಇತ್ತು.

ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಉತ್ತೇಡನ ಉದ್ದೇಶದಿಂದ ಪ್ರಾಯೋಗಿಕವಾಗಿ ಈ  ಸಂಚಾರ ನಡೆಸಲಾಗಿದೆ. ಒಂದೊಮ್ಮೆ ಈ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸಿದರೆ ಮುಂದಿನ ವರ್ಷ ದಸರಾ ಸಂದರ್ಭದಲ್ಲಿ ನಿತ್ಯ ಗೋಲ್ಡನ್ ಚಾರಿಯೇಟ್ ಆರಂಭಿಸಲು ನಿರ್ಧರಿಸಲಾಗಿದೆ.

ಪ್ರಯಾಣ ಆರಂಭಿಸುವುದಕ್ಕೆ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಗಿರೀಶ್ ಕಾರ್ನಾಡರು ಗುರುವಾರ ಮೈಸೂರಿಗೆ ಆಗಮಿಸಿ ದಸರಾ ಉದ್ಘಾಟಿಸುತ್ತಾರೆ ಎಂದು ಹೇಳಿದರು.

ನಾಳೆಯಿಂದ ಚಾರಿಯೇಟ್ ಸಂಚಾರ

ನಾಡಹಬ್ಬ ದಸರಾ ಅಂಗವಾಗಿ ಯಶವಂತಪುರದಿಂದ ಮೈಸೂರಿಗೆ ಗೋಲ್ಡನ್ ಚಾರಿಯೇಟ್ ವಿಶೇಷ ರೈಲು ವ್ಯವಸ್ಥೆ ಕಲ್ಪಿಸಲಾಗಿದೆ. ಸೆ. 26ರಿಂದ ಕಾರ್ಯಾರಂಭ ಮಾಡುವ ಈ ವಿಶೇಷ ರೈಲು ಅ. 4ರವರೆಗೆ ಸಂಚರಿಸಲಿದೆ.
ಯಶವಂತಪುರದಿಂದ ಬೆಳಗ್ಗೆ 7.15ಕ್ಕೆ ಹೊರಡುವ ರೈಲು ಬೆಂಗಳೂರು ಸಿಟಿ ರೈಲು ನಿಲ್ದಾಣಕ್ಕೆ (ಮೆಜೆಸ್ಟಿಕ್) 7.25ಕ್ಕೆ ಬರಲಿದೆ. 7.30ಕ್ಕೆ ಅಲ್ಲಿಂದ ಹೊರಡುವ ರೈಲು 9.50ಕ್ಕೆ ಮೈಸೂರು ರೈಲು ನಿಲ್ದಾಣ ತಲುಪಲಿದೆ. ಮತ್ತೆ ಅದೇ ರೈಲು ಪ್ರತಿದಿನ ರಾತ್ರಿ 8.25ಕ್ಕೆ ಮೈಸೂರಿನಿಂದ ಹೊರಟು ರಾತ್ರಿ 11.10ಕ್ಕೆ ಬೆಂಗಳೂರು ಸಿಟಿ ರೈಲು ನಿಲ್ದಾಣನಂತರ 11.30ಕ್ಕೆ ಯಶವಂತಪುರ ತಲುಪಲಿದೆ. ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳುವಂತೆ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.