ಬಂದೂಕು ಕೆಳಗಿಟ್ಟು ಮಾತುಕತೆಗೆ ಬನ್ನಿ

ವಿಶ್ವಸಂಸ್ಥೆ: ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಮಾತುಕತೆಗೆ ನಮಗೇನೂ ಅಭ್ಯಂತರವಿಲ್ಲ. ಆದರೆ, ಭಯೋತ್ಪಾದನೆಯನ್ನು ಬೆನ್ನಿಗಿಟ್ಟುಕೊಂಡು ಸ್ನೇಹದ ಹಸ್ತಚಾಚಿದರೆ ನಾವು ಕೈಕುಲುಕಲು ಸಿದ್ಧರಿಲ್ಲ. ಮಾತುಕತೆಗೂ ಮೊದಲು ಅದಕ್ಕೆ ಪೂರಕವಾದ ವಾತಾವರಣ ಪಾಕಿಸ್ತಾನ ನಿರ್ಮಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಪಾಕ್ಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಎರಡೂ ದೇಶಗಳ ನಡುವಿನ ಮಾತುಕತೆ ಮುರಿದು ಬೀಳಲು ಭಾರತವೇ ಕಾರಣ. ಭಾರತ ದ್ವಿಪಕ್ಷೀಯ ಮಾತುಕತೆಗೆ ಮುಂದುಗಾಬೇಕು ಎನ್ನುವ ಪಾಕ್ ಪ್ರಧಾನಿ ನವಾಜ್ ಷರೀಫ್ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಶುಕ್ರವಾರ ನೀಡಿದ್ದ ಹೇಳಿಕೆಗೆ ಅದೇ ವೇದಿಕೆಯಲ್ಲಿ ಮೋದಿ ತಕ್ಕ ಉತ್ತರ ನೀಡಿದ್ದಾರೆ. ನೀವು ಒಂದು ಕಡೆ ಮಾತುಕತೆಗೆ ಬನ್ನಿ ಅನ್ನುತ್ತೀರಿ. ಇಂಥ ನಿಲುವನ್ನು ಭಾರತ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳದು ಎನ್ನುವ ಸಂದೇಶವನ್ನು ವಿಶ್ವವೇದಿಕೆ ಮೇಲೆಯೇ ಮೋದಿ ಪಾಕ್ಗೆ ರವಾನಿಸಿದ್ದಾರೆ.
ವಿಶ್ವ ನಾಯಕರನ್ನುದ್ದೇಶಿಸಿ ಸುಮಾರು 35 ನಿಮಿಷಗಳ ಕಾಲ ಹಿಂದಿಯಲ್ಲೇ ಮಾತನಾಡಿದ ಅವರು, ವಿಶ್ವದ ಹಿರಿಯಣ್ಣನಾಗಲು ಹೊರಟಿರುವ ಅಮೆರಿಕ ಮತ್ತು ಚೀನಾದ ಮಹತ್ವಾಕಾಂಕ್ಷೆಯನ್ನೂ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇಡೀ ವಿಶ್ವ ಒಂದು ರಾಷ್ಟ್ರದ ಆಡೊಂಬಲವಲ್ಲ ಎಂದಿರುವ ಅವರು, ಸಮುದ್ರಕ್ಕೆ ಸಂಬಂಧಿಸಿದಂತೆ ಸೃಷ್ಟಿಯಾಗುತ್ತಿರುವ ಬಿಕ್ಕಟ್ಟನ್ನು ಚೀನಾ ಹೆಸರೇಳದೆ ಪ್ರಸ್ತಾಪಿಸಿದ್ದಾರೆ.
ಒಟ್ಟಾರೆ ವಿಶ್ವಸಂಸ್ಥೆಯ 69ನೇ ಮಹಾಸಭೆಯನ್ನುದ್ದೇಶಿಸಿ ಇದೇ ಮೊದಲ ಬಾರಿ ಮಾತನಾಡಿದ ಅವರು ಹೇಳಿದ್ದಿಷ್ಟು: ನಮ್ಮ ದೇಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ, ನ್ಯಾಯ ಹಾಗೂ ಅವಕಾಶಕ್ಕಾಗಿ ಧ್ವನಿ ಎತ್ತುತ್ತಲೇ ಬಂದಿದೆ. ದೇಶದ ಭವಿಷ್ಯ ನೆರೆ ರಾಷ್ಟ್ರಗಳೊಂದಿಗೆ ಬಾಂಧವ್ಯವನ್ನು ಅವಲಂಬಿಸಿದೆ ಎನ್ನುವ ಸ್ಪಷ್ಟ ಅರಿವು ನಮಗಿದೆ.
ಭಯೋತ್ಪಾದನೆಯ ಕರಿನೆರಳು ಇಲ್ಲದ ಪರಿಸ್ಥಿತಿಯಲ್ಲಿ ಸಹಕಾರ ಮತ್ತು ಮೈತ್ರಿಗೆ ಉತ್ತೇಜನ ನೀಡಲು ನಾನು ಪಾಕಿಸ್ತಾನದ ಜತೆಗೆ ಮಾತುಕತೆಗೆ ಸಿದ್ಧನಿದ್ದೇನೆ. ಪಾಕಿಸ್ತಾನವೂ ತನ್ನ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ಹಿಂಸೆಯ ಬದಲು ಮಾತುಕತೆಗೆ ಪೂರಕ ವಾತಾವರಣ ನಿರ್ಮಿಸಬೇಕು. ಆದರೆ ವಿಶ್ವಸಂಸ್ಥೆ ದ್ವಿಪಕ್ಷೀಯ ವಿವಾದ ಬಗೆಹರಿಸಲು ಸಾಧ್ಯವಿಲ್ಲ ಎಂಬುದನ್ನು ಪಾಕಿಸ್ತಾನ ಅರಿತುಕೊಳ್ಳಬೇಕು.
ಪಾಕ್ಗೂ ನೆರವು
ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಹದ ಸಂದರ್ಭದಲ್ಲಿ ನಾವು ದೊಡ್ಡ ಮಟ್ಟದ ಕಾರ್ಯಾಚರಣೆ ಕೈಗೊತ್ತಿಕೊಂಡಿದ್ದೇವೆ. ಜತೆಗೆ, ಪಾಕಿಸ್ತಾನಕ್ಕೂ ನಾವು ನೆರವು ನೀಡಲು ಮುಂದೆ ಬಂದಿದ್ದೇವೆ.
ಜಿ ಗುಂಪುಗಳು ಯಾಕೆ ಬೇಕು?
ಒಂದು ಕಾಲದಲ್ಲಿ ರಾಷ್ಟ್ರಗಳನ್ನು ಜೋಡಿಸುತ್ತಿದ್ದ ಸಮುದ್ರದಲ್ಲಿ ಇಂದು ತಿಕ್ಕಾಟ ಆರಂಭವಾಗಿದೆ. ಸೈಬರ್ ಯುದ್ಧದ ಕಾಲ ಎದುರಾಗಿದೆ. ಇಂಥ ಪರಿಸ್ಥಿತಿಯಲ್ಲಿ ವಿಶ್ವಸಂಸ್ಥೆಯಂಥ ಸಂಸ್ಥೆಯ ಅಗತ್ಯ ಹೆಚ್ಚಿದೆ. ವಿಶ್ವಸಂಸ್ಥೆಯಂಥ ಅದ್ಬುತ ವೇದಿಕೆ ಇದ್ದಾಗ್ಯೂ ಆರೇಳು ಜಿ ರಾಷ್ಟ್ರಗಳ ಗುಂಪುಬೇಕು? ನಾವು ಬಯಸಿದರೂ, ಬಯಸದಿದ್ದರೂ ಅದರ ಭಾಗವಾಗಿದ್ದೇವೆ. ಒಂದು ವೇಳೆ ಎಲ್ಲ ರಾಷ್ಟ್ರಗಳು ಒಂದೇ ವೇದಿಕೆ(ಜಿ ಆಲ್)ಯಡಿ ಬಂದರೆ ಪ್ರಮುಖ ವಿಚಾರಗಳ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


