

ಚೆನ್ನೈ: ಮೊದಲಿನಿಂದಲೂ ಅಮೆರಿಕನ್ ವೀಸಾ ಪಡೆಯಬೇಕಾದರೆ ಚೆನ್ನೈನಲ್ಲಿರುವ ಯುಎಸ್ ಕಾನ್ಸುಲೇಟ್ ಕಛೇರಿಯನ್ನು ಎಡತಾಕಬೇಕಾಗಿರುವುದು ಕರ್ನಾಟಕದ ಪ್ರಯಾಣಿಕರ ತಪ್ಪದ ಬವಣೆ.
ಮೊದಲಬಾರಿಗೆ ಪ್ರಯಾಣ ಮಾಡುವವರಂತೂ ಚೆನ್ನೈನಲ್ಲಿರುವ ಏಕೈಕ ಅಮೆರಿಕನ್ ಕಾನ್ಸುಲೆಟ್ ಕಛೇರಿಗೆ ಖುದ್ದಾಗಿ ಬಂದು ನಿಗದಿತ ಸಮಯಕ್ಕೆ ನಿಂತು ಕಾದು ಇಲ್ಲಿನ ಸಿಬ್ಬಂದಿಯ ತರಹಾವರಿ ಪ್ರಶ್ನೆಗಳನ್ನು ಎದುರಿಸುವ ಸಾಹಸವಂತೂ ಹಳೆಯದಾಯ್ತು. ಇದಕ್ಕೆ ಒಂದು ಪರ್ಯಾಯ ವ್ಯವಸ್ಥೆಯಾಗಿ ಕರ್ನಾಟಕಕ್ಕೆ ಸಲ್ಲಬೇಕಾಗಿದ್ದ ಪ್ರತ್ಯೇಕ ಕಛೇರಿ ಶಾಖೆ ಇದುವರೆಗೆ ಸಿಗಲೇ ಇಲ್ಲ.
ಇದು ನಮ್ಮ ರಾಜ್ಯ ಸರ್ಕಾರದ ಇಚ್ಚಾಶಕ್ತಿಯ ಕೊರತೆಯೋ, ಅಮೆರಿಕನ್ ಕಾನ್ಸುಲ್ ರವರ ಹುಂಬತನವೋ ತಿಳಿದಿಲ್ಲ.
ನೂರಾರು ಮಂದಿ ಕನ್ನಡಿಗರು ದಿನಾಲೂ ಚೆನ್ನೈಗೆ ಪಯಣಿಸಿ , ಹೋಟೆಲ್‌ಗಳಲ್ಲಿ ತಂಗಿ ವೀಸಾ ಸಂದರ್ಶನ ಮುಗಿಸಿ ಹೋಗಬೇಕಾದ ಅನಾವಶ್ಯಕ ತೊಂದರೆಯೊಂದು ಕಡೆಯಾದರೆ, ಇನ್ನು ವೀಸಾ ಅವಧಿ ಮುಗಿದ ನಂತರ ಅದನ್ನು ಕೇವಲ ವಿಸ್ತರಿಸಲು ಕೂಡಾ ಚೆನ್ನೈಗೇ ಬರಬೇಕಾದ ತ್ರಾಸದಾಯಕ ಅನಿವಾರ್ಯತೆಯೂ ಇದೆ.
ನಿಗದಿತ ಸಮಯಕ್ಕೆ ಒಂದು ಗಂಟೆ ಮುನ್ನವೇ ಎಲ್ಲರೂ ಸಾಲುಗಟ್ಟುತ್ತಾರೆ. ಅದರಲ್ಲೂ ಕರ್ನಾಟಕ, ತಮಿಳ್ನಾಡು, ಕೇರಳ, ಅಂಡಮಾನ್- ನಿಕೋಬಾರ್ ದ್ವೀಪದವರೆಲ್ಲಾ ಚೆನ್ನೈ ಲಿರುವ ಇದೇ ಕಛೇರಿಯನ್ನು ಸಂಪರ್ಕಿಸಬೇಕು. ಬಿಸಿಲು ಮಳೆ ಲೆಕ್ಕಿಸದೇ ಕ್ಯೂ ನಲ್ಲಿ ಸಮಯಕ್ಕೆ ತೆಗೆಯುವ ಸ್ವರ್ಗದ್ವಾರವೆಂಬಂತೆ ಚಾತಕ ಪಕ್ಷಿಗಳಂತೆ ಆ ಚಿಕ್ಕ ಫುಟ್‍ಪಾತಿನಲ್ಲಿ ಕಾದಿರಬೇಕು.
ಇನ್ನು ಒಳಗೆ ಬಿಟ್ಟಮೇಲೆ ಏನು ಘನಕಾರ್ಯವೆನ್ನುತ್ತೀರೋ? ಇತ್ತೀಚಿನ ಆಧಾರ್ ಕಾರ್ಡಿಗೆ ಸಾಮಾನ್ಯವಾಗಿ ಮಾಡುವಂತಾ ವೆಬ್‌ಕ್ಯಾಂ ಭಾವಚಿತ್ರ ತೆಗೆಯುವುದು, ಕೈ ಬೆರಳುಗಳ ಬೆರಳಚ್ಚಿನ ಮುದ್ರೆ ತೆಗೆದು ಕಳಿಸುವುದು ಇಷ್ಟೇ!..ಕೇವಲ ಹತ್ತು ನಿಮಿಷಗಳ ಸರ್ವೇಸಾಮಾನ್ಯ ಕೆಲಸ, ಇನ್ನು ವೀಸಾ ಎಂದಿಗೋ ಪಾಸ್ ಪೋರ್ಟಿನಲ್ಲಿ ಲಗತ್ತಿಸಿ ಅಂಚೆಯ ಮೂಲಕ ಕಳಿಸುತ್ತಾರಂತೆ.
ಇದಕ್ಕಾಗಿ ಈ ಅಂತರ್ಜಾಲ ಸೌಕರ್ಯದ ಯುಗದಲ್ಲಿ ಇಷ್ಟೆಲ್ಲಾ ಜನತೆಗೆ ದೈಹಿಕ ಶ್ರಮ ಕೊಡುವ ಅಗತ್ಯವಿದೆಯೆ?. ನಾನು ನೋಡಿದಂತೆ ಹಲವಾರು ವಯೋ ವೃದ್ದರು, ಕಂಕುಳು ಕೂಸು ಹಿಡಿದ ತಾಯಂದಿರು ಚೆನ್ನೈಯ ಬಿಸಿಲು ಶೆಕೆ ಯಲ್ಲಿ ಬಳಲುತ್ತಾ ಹತ್ತು ನಿಮಿಷದ ಈ ಪುಟ್ಟ ಕೆಲಸಕ್ಕೆ ನಿಲ್ಲಬೇಕಾದ ಅನಿವಾರ್ಯತೆ ಯಾವ ರೀತಿಯಲ್ಲಿ ನ್ಯಾಯಸಮ್ಮತ?.
ಕನಿಷ್ಟ ಪಕ್ಷ ಈ ವೀಸಾ ವಿಸ್ತರಣೆ ಎಂಬ ಈ ಸಾಮಾನ್ಯ ಕಾರ್ಯಕ್ಕಾಗಿ ಹೊರರಾಜ್ಯದಿಂದ ಬಂದು ತಂಗಿ, ಒಂದು ದಿನವೆಲ್ಲಾ ವ್ಯರ್ಥಮಾಡಿಕೊಳ್ಳುವುದು ಯಾವ ರೀತಿ ಸಮ್ಮತ? ನಮ್ಮ ಬೆಂಗಳೂರಿನಲ್ಲಿ ಕರ್ನಾಟಕದವರಿಗಾಗಿ ಒಂದು ಏಜೆನ್ಸಿ/ ಫ್ರಾಂಚೈಸಿ ಸಂಸ್ಥೆಯನ್ನು ತೆಗೆದು ಇದನ್ನು ಅಲ್ಲೇ ನಿಭಾಯಿಸಲು ಏನಡ್ಡಿ?
ಈಗಾಗಲೇ ಆಂಧ್ರ ಮತ್ತು ತೆಲಂಗಾಣ ರಾಜ್ಯವನ್ನು ಚೆನ್ನೈ ಕಚೇರಿಯ ವ್ಯಾಪ್ತಿಯಿಂದ ಬೇರ್ಪಡಿಸಿ ಅವರ ರಾಜಧಾನಿ ಹೈದರಾಬಾದಿನಲ್ಲಿ ಪ್ರತ್ಯೇಕ ಕಛೇರಿ ಸ್ಥಾಪಿಸಿದ್ದಾಗಿದೆ. ನಮ್ಮ ಕರ್ನಾಟಕದಿಂದ ಅಮೆರಿಕಕ್ಕೆ ಹೋಗುವ ಪ್ರಯಾಣಿಕರೂ ಸಾಕಷ್ಟು ಸಂಖ್ಯೆಯಲ್ಲೇ ಇದ್ದಾರೆ. ಅಂತದರಲ್ಲಿ ‘ಸಿಲಿಕಾನ್ ಸಿಟಿ’ ಎಂಬ ಹೆಗ್ಗಳಿಕೆಯಿಂದ ಬಹುರಾಷ್ಟ್ರೀಯ ಸಂಸ್ಥೆಗಳ ಕಣ್ಮಣಿಯಾಗಿರುವ ಬೆಂಗಳೂರಿನಲ್ಲಿ ಇಂತಾ ಕಛೇರಿಯ ಒಂದು ಶಾಖೆಯಿಲ್ಲದಿರುವುದು ಎಂತಾ ವಿಪರ್ಯಾಸ!
ನಮ್ಮ ರಾಜ್ಯ ಸರಕಾರ, ಕೇಂದ್ರದ ಎಂ ಪಿ ಗಳೂ ಕೈಗೂಡಿಸಿ ಇದಕ್ಕಾಗಿ ಅಮೇರಿಕನ್ ಕಾನ್ಸುಲ್ ಅಧಿಕಾರಿಗಳ ಮೇಲೆ ಒತ್ತಡ ತಂದು ಈ ವ್ಯವಸ್ಥೆಯನ್ನು ಕರ್ನಾಟಕಕ್ಕೆ ತರುವುದು ಅತ್ಯವಶ್ಯ ಮತ್ತು ಸಮಯೋಚಿತ ಕೂಡಾ.