ಚಿನ್ನ ದೋಚಿದ್ದ ಎಂಟು ಮಂದಿ ಬಂಧನ

ಪೊಲೀಸರ ಸೋಗಿನಲ್ಲಿ ಚಿನ್ನದ ವ್ಯಾಪಾರಿಯನ್ನು ಅಪಹರಿಸಿ, ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನ ದೋಚಿದ್ದ ಪೊಲೀಸ್ ಸಿಬ್ಬಂದಿ ಸೇರಿ ಎಂಟು ಮಂದಿಯನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ...
ಚಿನ್ನ ದೋಚಿದ್ದ ಎಂಟು ಮಂದಿ ಬಂಧನ (ಸಾಂದರ್ಭಿಕ ಚಿತ್ರ)
ಚಿನ್ನ ದೋಚಿದ್ದ ಎಂಟು ಮಂದಿ ಬಂಧನ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಪೊಲೀಸರ ಸೋಗಿನಲ್ಲಿ ಚಿನ್ನದ ವ್ಯಾಪಾರಿಯನ್ನು ಅಪಹರಿಸಿ, ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನ ದೋಚಿದ್ದ ಪೊಲೀಸ್ ಸಿಬ್ಬಂದಿ ಸೇರಿ ಎಂಟು ಮಂದಿಯನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ಮಹಮದ್ ರಫಿ, ಎ. ಮಾರಿಶನ್, ಎಸ್. ರವಿಚಂದ್ರ (ವಜಾಗೊಂಡಿರುವ ತಮಿಳು ನಾಡಿನ ಪಿಎಸ್‍ಐ), ಎಂ.ಗೋಕುಲ ಪ್ರಸಾದ್, ಪಿ. ರಮೇಶ್, ಎಸ್.ನಾಗಮಣಿ, ಶಾಬರ್ ಸಾದಿಕ್, ಆಂಧ್ರದ ರಾಜೇಶ್ ಬಂಧಿತರು. ಆರೋಪಿಗಳಿಂದ ನಗದು ಹಾಗೂ ಚಿನ್ನಾಭರಣ ಸೇರಿ ರು.14 ಲಕ್ಷಕ್ಕೂ ಅಧಿಕ ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮಹಮದ್ ರಫಿ ಹಾಗೂ ರಾಜೇಶ್ ಎಂಬುವವರ ನ್ನು ವಿಚಾರಣೆಗಾಗಿ ಪೊಲೀಸರ ವಶಕ್ಕೆ ತೆಗೆದುಕೊಂಡಿದ್ದು, ಉಳಿದ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣದಲ್ಲಿ ವಜಾಗೊಂಡಿರುವ ಚೆನ್ನೈನ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಕೈವಾಡ ಪ್ರಮುಖವಾಗಿದೆ ಎಂದು ಡಿಸಿಪಿ ಲಾಬೂರಾಂ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ವಜಾಗೊಂಡಿರುವ ಪೊಲೀಸ್ ರೂವಾರಿ: ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಗಳು, ಬೆಂಗಳೂರು ಮೂಲದ ಚಿನ್ನದ ವ್ಯಾಪಾರಿ ಧ್ರುಕೀಷನ್ ಖತ್ರಿ ಚೆನ್ನೈನಿಂದ ಆಗಾಗ ಆಭರಣ ತರುತ್ತಿದ್ದರು. ಇದನ್ನು ಗಮನಿಸಿದ ರಾಜೇಶ್ ಅವರ ಬಳಿ ಇದ್ದ ಚಿನ್ನ ದೋಚುವ ಬಗ್ಗೆ ಚಿಂತಿಸಿದ್ದ. ನಂತರ ತನ್ನ ಸ್ನೇಹಿತರಾದ ಉಳಿದ ಆರೋಪಿಗಳಿಗೆ ಈ ವಿಷಯ ತಿಳಿಸಿದ್ದಾನೆ.

ನಂತರ ಎಲ್ಲರೂ ಸೇರಿ ಚಿನ್ನ ದೋಚುವ ಬಗ್ಗೆ ಸಂಚು ರೂಪಿಸಿದ್ದರು. ಜೂ.10ರಂದು ಖತ್ರಿ ಅವರು ಚಿನ್ನ ತರಲು ಚೆನ್ನೈಗೆ ಹೋದಾಗ ರಾಜೇಶ್ ಅವರನ್ನು ಹಿಂಬಾಲಿಸಿದ್ದಾನೆ. ನೆಲ್ಲೂರಿನಿಂದ ಅವರು ಹತ್ತಿದ ಬಸ್‍ನಲ್ಲೇ ಬೆಂಗಳೂರಿಗೆ ಬಂದಿದ್ದಾನೆ. ಈ ನಡುವೆ ಬೆಂಗಳೂರಿನಲ್ಲಿದ್ದ ಉಳಿದ ಆರೋಪಿಗಳಿಗೆ ಕರೆ ಮಾಡಿ ಬಸ್ ಬೆಂಗಳೂರು ತಲುಪುವ ಸಮಯ ಸೂಚಿಸಿದ್ದಾನೆ.

ಮೆಜೆಸ್ಟಿಕ್‍ನಲ್ಲಿ ಖತ್ರಿ ಬಸ್ ಇಳಿದು ಆಟೋ ಹತ್ತಲು ಮುಂದಾಗುತ್ತಿದ್ದರು. ಅಷ್ಟರಲ್ಲಿ ಅಲ್ಲಿ ಗುಂಪು ಸೇರಿದ್ದ ಏಳು ಆರೋಪಿಗಳು ಅವರನ್ನು ಬಲವಂತವಾಗಿ ಕಾರಿನಲ್ಲಿ ಎಳೆದು ಕೂರಿಸಿಕೊಂಡಿದ್ದಾರೆ. ತಾವು ಪೊಲೀಸರು, ನಿಮ್ಮನ್ನು ಠಾಣೆಗೆ ಕರೆತರಲು ಇನ್ಸ್‍ಪೆಕ್ಟರ್ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.

ವಜಾಗೊಂಡಿದ್ದ ಪಿಎಸ್‍ಐ ರವಿಚಂದ್ರ ತನ್ನ ಬಳಿ ಇದ್ದ ಪೊಲೀಸ್ ಇಲಾಖೆಯ ಗುರುತಿನ ಚೀಟಿ ತೋರಿಸಿದ್ದಾನೆ. ಅದನ್ನು ಕಂಡು ಆರೋಪಿಗಳನ್ನು ನಿಜವಾದ ಪೊಲೀಸರೇ ಎಂದು
ನಂಬಿದ ಖತ್ರಿ ಸುಮ್ಮನೆ ಕುಳಿತಿದ್ದಾರೆ. ನಂತರ ಹೊಸೂರಿನಿಂದ ಮುಂದೆ 20 ಕಿ.ಮೀ. ದೂರ ಹೋಗಿ ನಿರ್ಜನ ಪ್ರದೇಶದ ಬಳಿ ಅವರನ್ನು ಕೆಳಗಿಳಿಸಿ, ಈ ಬಾರಿ ಕ್ಷಮೆ ನೀಡಿದ್ದೇವೆ ಎಂದು ಹೇಳಿ ಆಭರಣ ತೆಗೆದುಕೊಂಡು ಪರಾರಿಯಾಗಿದ್ದಾರೆ. ಅಂದು ಬೆಳಗ್ಗೆ ಸುಮಾರು 7.30ಕ್ಕೆ ಘಟನೆ ನಡೆದಿದ್ದು, ನಂತರ ಸ್ಥಳೀಯರ ನೆರವು ಪಡೆದ ಖತ್ರಿ ಕುಟುಂಬ ಸದಸ್ಯರಿಗೆ ವಿಷಯ ತಿಳಿಸಿದ್ದಾರೆ. ಸುಮಾರು 11.30ರ ವೇಳೆಗೆ ಉಪ್ಪಾರ ಪೇಟೆ ಠಾಣೆಗೆ ಆಗಮಿಸಿ ದೂರು ದಾಖಲಿಸಿ, ಅಪಹರಿಸಿದ್ದ ವಾಹನದ ಸಂಖ್ಯೆ ನೀಡಿದ್ದರು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com