

ರಾಂಚಿ: ಜಾರ್ಖಂಡದ ರಾಜಧಾನಿ ರಾಂಚಿಯ ಹೊರವಲಯದಲ್ಲಿ ಮಾವೋವಾದಿಗಳು ಮತ್ತು ಪೊಲೀಸರ ನಡುವಿನ ಗುಂಡಿನ ಕಾಳಗದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡಿದ್ದು, ಅವರ ಚಾಲಕ ಹಾಗೂ ಒಬ್ಬ ಮಾವೋವಾದಿ ಗೆರಿಲ್ಲಾ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಂಚಿಯ ಹಿರಿಯ ಪೊಲೀಸ್ ಸೂಪರಿಂಟೆಂಡೆಂಟ್ (ಎಸ್ ಎಸ್ ಪಿ) ಪ್ರಭಾತ್ ಕುಮಾರ್, ಕ್ಹುತಿ ಜಿಲ್ಲೆಯ ಗುಂಡಿನ ಕಾಳಗದಲ್ಲಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಮಾವೋವಾದಿಗಳು ಅಡಗಿದ್ದಾರೆ ಎಂಬ ವಿಷಯ ತಿಳಿದ ಪ್ರಭಾತ್ ಕುಮಾರ್ ಮತ್ತು ತಂಡ ಕಾರ್ಯಾಚರಣೆಗಾಗಿ ಅಲ್ಲಿಗೆ ತೆರಳಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಧಾವಿಸಿದಾಕ್ಷಣ ಅವರನ್ನು ಸುತ್ತುವರೆದ ಮಾವೋವಾದಿಗಳು ಆವರ ಮೇಲೆ ಗುಂಡಿನ ಮಳೆಗೆರೆದಿದ್ದಾರೆ, ಈ ಗುಂಡಿನ ಕಾಳಗದಲ್ಲಿ ಎಸ್ ಎಸ್ ಪಿ ಯವರಿಗೆ ಕೈ ಮತ್ತು ಎದೆಗೆ ಗುಂಡು ತಗುಲಿದ್ದು ಅವರ ಚಾಲಕ ಮೃತಪಟ್ಟಿದ್ದಾನೆ. ಪೊಲೀಸರು ಪ್ರತಿಯಾಗಿ ಗುಂಡು ಹರಿಸಿದಾಗ ಮಾವೋವಾದಿ ಗೆರಿಲ್ಲಾ ಒಬ್ಬ ಕೂಡ ಮೃತಪಟ್ಟಿದ್ದಾನೆ.
ರಾಂಚಿ ಎಸ್ ಎಸ್ ಪಿ ಯವರನ್ನು ಮೊದಲು ಪ್ರಾಥಮಿಕ ಚಿಕಿತ್ಸೆಗಾಗಿ ಕ್ಹುತಿ ದಾದರ್ ಆಸ್ಪತ್ರೆಗೆ ಸೇರಿಸಿದ್ದು ನಂತರ ರಾಚಿಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಜೀವಕ್ಕೆ ಹಾನಿಯಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.