ಲೋಕಾ ಲಂಚ: ಸಿಕ್ಕಿಬಿದ್ದ ಹೊಟ್ಟೆ ಕೃಷ್ಣ

ಲೋಕಾಯುಕ್ತ ಸಂಸ್ಥೆ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್ ಐಟಿ) ಅಧಿಕಾರಿಗಳು ಮತ್ತೊಬ್ಬ ಆರೋಪಿ, ಭ್ರಷ್ಟರ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ ಹೊಟ್ಟೆ ಕೃಷ್ಣನನ್ನು ಬಂಧಿಸಿದ್ದಾರೆ...
ಲೋಕಾಯುಕ್ತ ಕಚೇರಿ (ಸಂಗ್ರಹ ಚಿತ್ರ)
ಲೋಕಾಯುಕ್ತ ಕಚೇರಿ (ಸಂಗ್ರಹ ಚಿತ್ರ)

ಬೆಂಗಳೂರು: ಲೋಕಾಯುಕ್ತ ಸಂಸ್ಥೆ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್ ಐಟಿ) ಅಧಿಕಾರಿಗಳು ಮತ್ತೊಬ್ಬ ಆರೋಪಿ, ಭ್ರಷ್ಟರ ನಡುವೆ ಮಧ್ಯವರ್ತಿಯಾಗಿ  ಕೆಲಸ ಮಾಡುತ್ತಿದ್ದ ಹೊಟ್ಟೆ ಕೃಷ್ಣನನ್ನು ಬಂಧಿಸಿದ್ದಾರೆ.

ಇದರೊಂದಿಗೆ ಬಂಧಿತ ಆರೋಪಿಗಳ ಸಂಖ್ಯೆ ಹನ್ನೊಂದಕ್ಕೇರಿದೆ. ಚೆನ್ನೈ ಮೂಲಕ ಶ್ರೀಲಂಕಾಗೆ ಪರಾರಿಯಾಗುವ ಯತ್ನದಲ್ಲಿದ್ದಾಗ ಆರೋಪಿಯನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಎಸ್‍ಐಟಿ ತಂಡದಿಂದ ಬಂಧಿತನಾಗಿರುವ ಆರೋಪಿ ವಿ.ಭಾಸ್ಕರ್‍ನ ಆಪ್ತನಾಗಿರುವ ಹೊಟ್ಟೆ ಕೃಷ್ಣನನ್ನು ಎಸ್‍ಐಟಿ ಅಧಿಕಾರಿಗಳು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಆ.29ರವರೆಗೆ ತಮ್ಮ ವಶಕ್ಕೆ ಪಡೆದಿದ್ದಾರೆ.

ತಲೆಮರೆಸಿಕೊಂಡಿದ್ದ
ಲೋಕಾಯುಕ್ತ ಭ್ರಷ್ಟಾಚಾರ ಪ್ರಕರಣ ಬಹಿರಂಗವಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಹೊಟ್ಟೆ ಕೃಷ್ಣನ ಬಂಧನಕ್ಕಾಗಿ ಎಸ್‍ಐಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದರು. ಈತ ಶ್ರೀಲಂಕಾಕ್ಕೆ  ಪರಾರಿಯಾಗುವ ಉದ್ದೇಶದಿಂದ ಚೆನ್ನೈ ವಿಮಾನ ನಿಲ್ದಾಣದಲ್ಲಿರುವ ಬಗ್ಗೆ ಖಚಿತ ಮಾಹಿತಿ ಅಧಿಕಾರಿಗಳಿಗೆ ಲಭ್ಯವಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಚೆನ್ನೈ ವಿಮಾನ ನಿಲ್ದಾಣದಲ್ಲಿ ಶನಿವಾರ ತಡರಾತ್ರಿ ಕೃಷ್ಣನನ್ನು ಬಂಧಿಸಿ ನಗರಕ್ಕೆ ಕರೆತಂದು ಬೌರಿಂಗ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಿದರು.

ಭಾನುವಾರ ಬೆಳಗ್ಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ನ್ಯಾಯಾಧೀಶ ವಿ.ಜಿ. ಬೋಪಯ್ಯ ಅವರ ನಿವಾಸಕ್ಕೆ ಕರೆದೊಯ್ದು ಹಾಜರು ಪಡಿಸಿದರು. ಬಂಧಿತ ಹೊಟ್ಟೆ ಕೃಷ್ಣ ಆರೋಪಿ ವಿ.ಭಾಸ್ಕರ್ ನ ಆಪ್ತನಾಗಿದ್ದು, ಪ್ರಕರಣಕ್ಕೆ  ಸಂಬಂಧಿಸಿದಂತೆ ಹಲವು ಮಾಹಿತಿಗಳು ಆರೋಪಿಯ ಬಳಿ ಇವೆ. ಹೀಗಾಗಿ ಹೆಚ್ಚಿನ ವಿಚಾರಣೆ ನಡೆಸಬೇಕಿದ್ದು, ವಶಕ್ಕೆ ನೀಡುವಂತೆ ಮಾಡಿದ ಮನವಿ ಪುರಸ್ಕರಿಸಿದ ನ್ಯಾಯಾಧೀಶರು ಆ.29ರವರೆಗೆ ವಶಕ್ಕೆ ನೀಡಿದರು.

ಆರ್‍ಟಿಐ ಕಾರ್ಯಕರ್ತ
ಆರ್‍ಟಿಐ ಕಾರ್ಯಕರ್ತನಾಗಿದ್ದ ಹೊಟ್ಟೆ ಕೃಷ್ಣ ಹೆಚ್ಚಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸಂಬಂಧಪಟ್ಟಂತೆ ಮಾಹಿತಿಗಳನ್ನು ಆರ್‍ಟಿಐ ಮೂಲಕ ಪಡೆದುಕೊಳ್ಳುತ್ತಿದ್ದ. ಲೋಕಾಯುಕ್ತ  ಸಂಸ್ಥೆ ಹೆಸರು ಹೇಳಿಕೊಂಡು ಭ್ರಷ್ಟ ಅಧಿಕಾರಿಗಳನ್ನು ಸುಲಿಗೆ ಮಾಡುತ್ತಿದ್ದ ಅಶ್ವಿನ್ ರಾವ್ ಸಹಚರ ವಿ.ಭಾಸ್ಕರ್‍ನ ಆಪ್ತನಾಗಿದ್ದ. ಸರ್ಕಾರಿ ಅಧಿಕಾರಿಗಳಿಂದ ಮಾಡುತ್ತಿದ್ದ ಸುಲಿಗೆಯಲ್ಲಿ ಹೊಟ್ಟೆ  ಕೃಷ್ಣನಿಗೂ ಪಾಲು ತಲುಪುತ್ತಿತ್ತು ಎಂಬುದು ವಿ. ಭಾಸ್ಕರನ ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಎಸ್‍ಐಟಿ ಮೂಲಗಳು ಹೇಳಿವೆ.

ಆರೋಪಿಗಳಾದ ವಿ.ಭಾಸ್ಕರ್, ಅಶೋಕ್‍ಕುಮಾರ್, ಶಂಕರೇಗೌಡ, ಶ್ರೀನಿವಾಸಗೌಡ, ನರಸಿಂಹಮೂರ್ತಿ, ಸಾಧಿಕ್ ಅವರನ್ನು ವಿಚಾರಣೆಗೊಳಪಡಿಸಿದಾಗ ಹೊಟ್ಟೆ ಕೃಷ್ಣನೂ ಪ್ರಕರಣದಲ್ಲಿ  ಭಾಗಿಯಾಗಿರುವ ಬಗ್ಗೆ ಮತ್ತು ಆತನ ಪಾತ್ರದ ಬಗ್ಗೆ ಮಾಹಿತಿ ನೀಡಿದ್ದರು. ಅಲ್ಲದೇ, ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ಅವರ ತನಿಖೆಯಲ್ಲೂ ಆರೋಪಿಯ ಹೆಸರು ಕಂಡು ಬಂದಿತ್ತು  ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com