ತಮಿಳುನಾಡಿನ ಸದ್ಯದ ಪರಿಸ್ಥಿತಿಯ ಮಾಹಿತಿ ಪಡೆದ ಖಾದರ್

ಜಲಗಂಡದಿಂದ ಬಳಲುತ್ತಿರುವ ಚೆನ್ನೈಗೆ ಆರೋಗ್ಯ ಸೇವೆ ಕಲ್ಪಿಸುವ ವಿಚಾರದಲ್ಲಿ ತಮಿಳುನಾಡು ಸರ್ಕಾರವು ಕರ್ನಾಟಕದಿಂದ ಯಾವುದೇ ಸಹಾಯ ಅಪೇಕ್ಷೆ ಪಡದೇ ಇದ್ದರೂ..
ಕರ್ನಾಟಕದಿಂದ ಚೆನ್ನೈಗೆ ರವಾನೆಯಾಗುತ್ತಿರುವ ಪರಿಹಾರ ಸಾಮಗ್ರಿ (ಸಂಗ್ರಹ ಚಿತ್ರ)
ಕರ್ನಾಟಕದಿಂದ ಚೆನ್ನೈಗೆ ರವಾನೆಯಾಗುತ್ತಿರುವ ಪರಿಹಾರ ಸಾಮಗ್ರಿ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಜಲಗಂಡದಿಂದ ಬಳಲುತ್ತಿರುವ ಚೆನ್ನೈಗೆ ಆರೋಗ್ಯ ಸೇವೆ ಕಲ್ಪಿಸುವ ವಿಚಾರದಲ್ಲಿ ತಮಿಳುನಾಡು ಸರ್ಕಾರವು ಕರ್ನಾಟಕದಿಂದ ಯಾವುದೇ ಸಹಾಯ ಅಪೇಕ್ಷೆ ಪಡದೇ ಇದ್ದರೂ ರಾಜ್ಯ  ಸರ್ಕಾರ ಮಾತ್ರ ತನ್ನ ವ್ಯಾಪ್ತಿಯಲ್ಲಿ ಮಾಡಬಹುದಾದ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದೆ.

ಸೋಮವಾರ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ತಮ್ಮ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪೂರ್ವತಯಾರಿ ಕುರಿತಂತೆ ಚರ್ಚಿಸಿದರು. ಅಲ್ಲದೇ ತಮಿಳುನಾಡಿನ ಸದ್ಯದ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು `ತಮಿಳುನಾಡು ಸರ್ಕಾರದೊಂದಿಗೆ ಈಗಾಗಲೇ ಚರ್ಚಿಸಿದ್ದು, ಸಹಕಾರ ನೀಡಲು  ಸಿದ್ಧವಿರುವುದಾಗಿ ತಿಳಿಸಿದ್ದೇವೆ. ಅಲ್ಲಿಂದ ಅಗತ್ಯತೆಯ ಬೇಡಿಕೆ ಬಂದ ಕೂಡಲೇ ನಾವು ಕಾರ್ಯಾಚರಣೆ ಆರಂಭಿಸುತ್ತೇವೆ' ಎಂದರು. `ಅಲ್ಲಿನ ಪ್ರಮುಖ ವೈದ್ಯರೇನಕರಿಂದ ಆರೋಗ್ಯ ಸೇವೆಯ ಕೊರತೆ  ಬಗ್ಗೆ ಮಾಹಿತಿ ಬಂದಿದೆ.

ಆದರೆ, ತಮಿಳುನಾಡು ಸರ್ಕಾರ ಅಧಿಕೃತವಾಗಿ ಒಪ್ಪಿಗೆ ಕೊಡದೇ ನಾವು ಅಲ್ಲಿ ಕಾರ್ಯ ನಿರ್ವಹಿಸುವುದು ಕಷ್ಟವಾಗುತ್ತದೆ ಎಂದರಲ್ಲದೇ, ಈ ಮಧ್ಯೆಯೇ ನಮ್ಮ ವ್ಯಾಪ್ತಿಯಲ್ಲಿ  ಏನೆಲ್ಲಾ ತಯಾರಿ ಮಾಡಬಹುದೋ ಅದೆಲ್ಲವನ್ನೂ ಮಾಡಿಕೊಂಡಿದ್ದೇವೆ. ಪ್ರಕೃತಿ ವಿಕೋಪದ ನಂತರ ಸಾಂಕ್ರಾಮಿಕ ರೋಗಗಗಳು ಹರಡುವ ಸಾದ್ಯತೆ ಜಾಸ್ತಿ ಇದೆ, ಈ ಹಿನ್ನೆಲೆಯಲ್ಲಿ ಯಾವ ರೀತಿ  ರೋಗ ಬರಬಹುದೆಂದು ಅಂದಾಜಿಸಿ ಮುಂಜಾಗ್ರತಾ ಕ್ರಮಕೈಗೊಳ್ಳಲಾಗುತ್ತಿದೆ' ಎಂದು ತಿಳಿಸಿದರು.

ಸಭೆಯಲ್ಲಿ ಆರೋಗ್ಯ ಇಲಾಖೆ ಕಾರ್ಯದರ್ಶಿ ಲಕ್ಷ್ಮಿನಾರಾಯಣ, ಆಯುಕ್ತ ಪಿ.ಎಸ್. ವಸ್ತ್ರದ್ ಮತ್ತಿತರರು ಇದ್ದರು.

ರಾಜ್ಯ ಕೈಗೊಂಡ ಕ್ರಮಗಳು

1. ವಿವಿಧ ಕಾರಣಗಳಿಂದಾಗಿ ಸಾಕಷ್ಟು ಕನ್ನಡಿಗರು ಚೆನ್ನೈಗೆ ತೆರಳಿದವರಿದ್ದು, ಅನೇಕರು ಈ ವಿಕೋಪದಲ್ಲಿ ಸಿಲುಕಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕೃತಿ ವಿಕೋಪದಿಂದ ಆರೋಗ್ಯ  ಸಮಸ್ಯೆಯುಂಟು  ಮಾಡಿಕೊಂಡವರ ನೆರವಿಗಾಗಿ ಟೋಲ್ ಫ್ರೀ ಸೇವೆ ಆರಂಭಿಸಲಾಗಿದೆ. 18004250235ಗೆ ಕರೆ ಮಾಡಿದರೆ, ಆರೋಗ್ಯ ಸೇವೆಯ ಸಲಹೆ ಸೂಚನೆ ಮಾರ್ಗದರ್ಶನ ಮಾಡಲಾಗುತ್ತದೆ.  ಅಗತ್ಯಬಿದ್ದರೆ ಕರ್ನಾಟಕದಿಂದಲೇ ನೆರವಿಗಾಗಿ ವೈದ್ಯರನ್ನು ಕಳಿಸಲಾಗುತ್ತದೆ.

2. ಬೆಂಗಳೂರಿನ ನಾಲ್ಕು ಕಡೆಗಳಲ್ಲಿ ಹೆಲ್ತ್ ಡೆಸ್ಕ್ ಆರಂಭಿಸಲಾಗಿದೆ. ಕಂಟೋನ್ಮೆಂಟ್ ರೈಲ್ವೇ ನಿಲ್ದಾಣ ನಗರ ರೈಲ್ವೇ ನಿಲ್ದಾಣ ಮತ್ತು ಶಾಂತಿನಗರ, ಕಲಾಸಿಪಾಳ್ಯದ ಬಸ್ ನಿಲ್ದಾಣದಲ್ಲಿ ಈ ಡೆಸ್ಕ್  ಕಾರ್ಯನಿರ್ವಹಣೆ ಮಾಡುತ್ತವೆ. ಚೆನ್ನೈಕಡೆಯಿಂದ ಬಂದಂತಹವರು ಈ ಡೆಸ್ಕ್ ನ ಸಹಾಯ ಪಡೆಯಬಹುದು. 108 ವಾಹನಗಳನ್ನು ಸಿದ್ಧವಾಗಿಟ್ಟುಕೊಳ್ಳಲಾಗಿದೆ.

3. ಚೆನ್ನೈನ ಪ್ರಕೃತಿ ವಿಕೋಪದಲ್ಲಿ ಸಿಕ್ಕು ಬೆಂಗಳೂರಿಗೆ ಆಗಮಿಸಿದವರಿದ್ದರೆ ಅವರಿಗೆ ಬೆಂಗಳೂರಿನ 4 ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ತಪಾಸಣೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಕೆ.ಸಿ. ಜನರಲ್  ಆಸ್ಪತ್ರೆ, ಬೌರಿಂಗ್ ಆಸ್ಪತ್ರೆ, ವಿಕ್ಟೋರಿಯ, ಜಯನಗರ ಆಸ್ಪತ್ರೆಗಳಲ್ಲಿ ಈ ಸೇವೆ ಡಿಸೆಂಬರ್ 31ರವರೆಗೆ ನೀಡಲು ನಿರ್ಧರಿಸಲಾಗಿದೆ.

4. ಧ್ರವರೂಪದ ಆಮ್ಲಜನಕಬೇಕೆಂದು ಅಲ್ಲಿನ ಆರೋಗ್ಯ ಇಲಾಖೆ ಕೋರಿತ್ತು, ಅದರಂತೆ ನಾವು ಈಗಾಗಲೇ ಒಂದು ಟ್ಯಾಂಕರ್ ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ. ಜೊತೆಗೆ ಕರ್ನಾಟಕಕ್ಕೆ ಧ್ರವರೂಪದ  ಆಮ್ಲಜನಕ ಸರಬರಾಜು ಮಾಡುವ ಕಂಪನಿಯ ಮಾಹಿತಿಯನ್ನು ತಮಿಳುನಾಡು ಸರ್ಕಾರಕ್ಕೂ ನೀಡಲಾಗಿದೆ.

5. ನೆರೆಯ ನಂತರ ಹರಡುವ ಸಾಂಕ್ರಾಮಿಕ ರೋಗಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಔಷಧಿಯನ್ನು ಸಿದ್ಧಪಡಿಸಿಟ್ಟುಕೊಳ್ಳಲಾಗಿದ್ದು, ತಮಿಳುನಾಡು ಸರ್ಕಾರ ಬಯಸಿದ ಕೂಡಲೇ ಸರಬರಾಜು  ಮಾಡಲಾಗುತ್ತದೆ.

6. ಪ್ರಕೃತಿ ವಿಕೋಪ ಘಟನೆಗಳು ನಡೆದ ಸಂದರ್ಭದಲ್ಲಿ ರಾಜ್ಯದ ಅನೇಕ ವೈದ್ಯರು, ಸಮಾಜ ಸೇವಾ ಸಂಸ್ಥೆಗಳ ಸದಸ್ಯರು ಸ್ವಯಂಪ್ರೇರಿತರಾಗಿ ಘಟನಾ ಸ್ಥಳಕ್ಕೆ ಹೋಗಿ ಸೇವೆ ಸಲ್ಲಿಸುತ್ತಾರೆ.  ಅಂತವರನ್ನೆಲ್ಲಾ ಒಂದೆಡೆ ಸೇರಿಸಿ ಒಂದು ತಂಡವಾಗಿ ರೂಪುಗೊಳಿಸುವ ಆಲೋಚನೆ ಸರ್ಕಾರಕ್ಕಿದೆ. ಶೀಘ್ರವಾಗಿ ಸಭೆ ಕರೆಯಲೂ ಸಹ ತೀರ್ಮಾನಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com