

ಮುಂಬೈ: ಹಿಟ್ ಅಂಡ್ ರನ್ ಪ್ರಕರಣದಲ್ಲಿ ಮುಂಬೈ ಪೊಲೀಸರು ತನಿಖೆ ಸರಿಯಾಗಿ ನಡೆದಿಲ್ಲ. ಅಲ್ಲದೇ ಪ್ರಾಷಿಕ್ಯೂಷನ್ ಕೊಟ್ಟ ಸಾಕ್ಷ್ಯಾಧಾರಗಳು ಸಾಕಾಗಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಗುದ್ದೋಡು ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಅಂತಿಮ ತೀರ್ಪು ಪ್ರಕಟಿಸಿದ ನ್ಯಾ.ಜೋಷಿ ಅವರು, ಮುಂಬೈ ಪೊಲೀಸರು ತನಿಖೆ ಸರಿಯಾಗಿ ನಡೆದಿಲ್ಲ. ಪ್ರಾಷಿಕ್ಯೂಷನ್ ಕೊಟ್ಟ ಸಾಕ್ಷ್ಯಾಧಾರಗಳು ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರು ಅಪರಾಧಿ ಎಂದು ತೀರ್ಪು ನೀಡಲು ಸಾಕಾಗುವುದಿಲ್ಲ. ಹಾಗಾಗಿ ಸಲ್ಮಾನ್ ಖಾನ್ ಅವರಿಗೆ ಯಾವುದೇ ಸೆಕ್ಷನ್ ಅಡಿಯಲ್ಲಿ ಶಿಕ್ಷೆ ನೀಡಲಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ನ್ಯಾಯಾಧೀಶರಾದ ನ್ಯಾ.ಜೋಷಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಲ್ಮಾನ್ ಖಾನ್ ಗೆ ಮುಂಬೈ ಸೆಷನ್ಸ್ ಕೋರ್ಟ್ ನೀಡಿದ್ದ 5 ವರ್ಷಗಳ ಜೈಲುಶಿಕ್ಷೆ ತೀರ್ಪನ್ನು ರದ್ದುಪಡಿಸಿರುವ ಹೈಕೋರ್ಟ್, ಸಲ್ಮಾನ್ ಖಾನ್ ಯಾರನ್ನು ಕೊಂದಿಲ್ಲ. ಕುಡಿದು ವಾಹನ ಚಲಾಯಿಸುತ್ತಿದ್ದರು ಎನ್ನುವುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ಹಾಗಾಗಿ ಸಲ್ಮಾನ್ ಖಾನ್ ಅವರನ್ನು ನಿರ್ದೋಷಿ ಎಂದು ಘೋಷಿಸುವುದಾಗಿ ಜಡ್ಜ್ ನ್ಯಾ.ಜೋಷಿ ಹೇಳಿದರು.
ಸಲ್ಮಾನ್ ಗೆ ಕೋರ್ಟ್ ಗೆ ಬರಲು ಹೇಳಿ
ಹಿಟ್ ಅಂಡ್ ರನ್ ಪ್ರಕರಣದ ಅಂತಿಮ ತೀರ್ಪು ಪ್ರಕಟಿಸುವ ವೇಳೆ, ಸಲ್ಮಾನ್ ಖಾನ್ ಎಲ್ಲಿದ್ದರೂ ನ್ಯಾಯಾಲಯಕ್ಕೆ ಬರಲು ಹೇಳಿ, ಅವರು ಇಲ್ಲಿ ಉಪಸ್ಥಿತರಿರಬೇಕು ಎಂದು ಜಡ್ಜ್ ನ್ಯಾ.ಎ.ಆರ್.ಜೋಷಿ ಸಲ್ಮಾನ್ ಪರ ವಕೀಲರಿಗೆ ಸೂಚಿಸಿದ್ದರು. ಆ ನಿಟ್ಟಿನಲ್ಲಿ ಸಲ್ಮಾನ್ ಖಾನ್ 1.30ಕ್ಕೆ ಕೋರ್ಟ್ ಗೆ ಹಾಜರಾಗುತ್ತಾರೆ ಎಂದು ಕೋರ್ಟ್ ಗೆ ಮಾಹಿತಿ ನೀಡಿದರು. ಅದರಂತೆ 1.35ಕ್ಕೆ ಸಲ್ಮಾನ್ ಕೋರ್ಟ್ ಗೆ ಆಗಮಿಸಿದ್ದರು.
2002ರ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಕೆಳಹಂತದ ನ್ಯಾಯಾಲಯ ಸಲ್ಮಾನ್ ಖಾನ್ ಗೆ 5 ವರ್ಷ ಜೈಲುಶಿಕ್ಷೆ ವಿಧಿಸಿತ್ತು. ಬಳಿಕ ಖಾನ್ ಜಾಮೀನಿನ ಮೇಲೆ ಹೊರಬಂದಿದ್ದರು.