

ನವದೆಹಲಿ: ಸಿಬಿಐ ದಾಳಿ ಮಾಡಿದ್ದು ದೆಹಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಚೇರಿ ಮೇಲಲ್ಲ, ನನ್ನ ಕಚೇರಿ ಮೇಲೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಹೇಳಿದ್ದಾರೆ.
ಸಿಬಿಐ ದಾಳಿಯ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ರಾಜೇಂದ್ರ ಕುಮಾರ್ ಕಚೇರಿ ಮೇಲೆ ದಾಳಿ ನಡೆಸಿದ್ದೇವೆ ಎಂಬುದು ಸಂಪೂರ್ಣ ಸುಳ್ಳು. ಸಿಬಿಐ ನನ್ನ ಕಚೇರಿ ಸೇರಿದಂತೆ ಹಲವು ಕಡೆ ದಾಳಿ ನಡೆಸಿದೆ. ಆದರೆ 2007ರ ಪ್ರಕರಣದ ದಾಖಲೆಗಳು ಮುಖ್ಯಮಂತ್ರಿ ಕಚೇರಿಯಲ್ಲ ಇರುವುದಿಲ್ಲ ಎಂದಿದ್ದಾರೆ.
ಸಿಬಿಐ ದಾಳಿ ಉದ್ದೇಶವೇ ಬೇರೆ. ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಡಿಡಿಸಿಎ ಅಧ್ಯಕ್ಷರಾಗಿದ್ದ ವೇಳೆ ನಡೆದ ಭ್ರಷ್ಟಾಚಾರ ಪ್ರಕರಣದ ದಾಖಲೆಗಳಿಗಾಗಿ ಪ್ರಾಮಾಣಿಕ ಸರ್ಕಾರ ಮೇಲೆ ದಾಳಿ ನಡೆಸಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
ಯಾವುದೇ ಪ್ರಕರಣದಲ್ಲಿ ಒಬ್ಬ ವ್ಯಕ್ತಿ ಮಾತ್ರ ಇರುವುದಿಲ್ಲ. ಹೀಗಾಗಿ ಇತರೆ ಅಧಿಕಾರಿಗಳ ಮೇಲೆ ಏಕೆ ದಾಳಿ ನಡೆಸಲಿಲ್ಲ? ದೇಶದಲ್ಲಿ ನನ್ನ ಪಕ್ಷದ ಪ್ರಮಾಣಿಕತೆ ಬಗ್ಗೆ ಜನರಲ್ಲಿ ಯಾವುದೇ ಅನುಮಾನ ಇಲ್ಲ. ಆದರೂ ನನ್ನ ಕಚೇರಿ ಮೇಲೆ ದಾಳಿ ಮಾಡಿದ್ದು ಏಕೆ? ಎಂದು ಕೇಜ್ರಿವಾಲ್ ಸಿಬಿಐ ಅನ್ನು ಪ್ರಶ್ನಿಸಿದರು.
ನನ್ನ ಮಗ ತಪ್ಪು ಮಾಡಿದರೂ ನಾನು ಸಹಿಸುವುದಿಲ್ಲ ಎಂದ ದೆಹಲಿ ಸಿಎಂ, ನೀವು ಸಿಬಿಐ ಬಿಟ್ಟು ಬೇರೆ ಯಾರಾನ್ನಾದರೂ ಹೆದರಿಸಬಹುದು. ಆದರೆ ನನ್ನನ್ನು ಹೆದರಿಸುವುದು ಸಾಧ್ಯವಿಲ್ಲ ಮೋದಿಜೀ ಎಂದು ಸವಾಲು ಹಾಕಿದರು.
ಇದೇ ವೇಳೆ ಪ್ರಧಾನಿ ಮೋದಿ ಅವರನ್ನು ಸೈಕೋಪಾತ್, ಹೇಡಿ ಎಂದಿದ್ದಕ್ಕೆ ಕ್ಷಮೆಯಾಚಿಸಬೇಕು ಎಂಬ ಬಿಜೆಪಿ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್, ಮೊದಲು ಅವರು ಮಾಡಿದ ತಪ್ಪಿಗೆ ಕ್ಷಮೆ ಕೇಳಲಿ. ನಂತರ ನಾವು ಬಳಸಿದ ಪದಕ್ಕೆ ಕ್ಷಮೆ ಕೇಳುತ್ತೇವೆ ಎಂದರು.