ಲೋಕಾ ನೇಮಕ ಪ್ರಕ್ರಿಯೆ ಶುರು

ಲೋಕಾಯುಕ್ತರ ನೇಮಕಕ್ಕೆ ರಾಜ್ಯ ಸರ್ಕಾರ ಪ್ರಕ್ರಿಯೆ ಆರಂಭಿಸಿದ್ದು, ಕಾನೂನು ಆಯೋಗದ ಅಧ್ಯಕ್ಷ ಎಸ್.ಆರ್ .ನಾಯಕ್ ಅವರ ಬಗ್ಗೆ ವಿಶೇಷ ಒಲವು...
ಲೋಕಾಯುಕ್ತ
ಲೋಕಾಯುಕ್ತ

ಬೆಂಗಳೂರು: ಲೋಕಾಯುಕ್ತರ ನೇಮಕಕ್ಕೆ ರಾಜ್ಯ ಸರ್ಕಾರ ಪ್ರಕ್ರಿಯೆ ಆರಂಭಿಸಿದ್ದು, ಕಾನೂನು ಆಯೋಗದ ಅಧ್ಯಕ್ಷ ಎಸ್.ಆರ್ .ನಾಯಕ್ ಅವರ ಬಗ್ಗೆ ವಿಶೇಷ ಒಲವು ತೋರುತ್ತಿದೆ.

ಲೋಕಾಯುಕ್ತರ ನೇಮಕ ಸಂಬಂಧ ಡಿಸೆಂಬರ್ 21ರಂದು ರಾಜ್ಯ ಸರ್ಕಾರ ಸಕ್ಷಮ ಪ್ರಾಧಿಕಾರದ ಸಭೆ ಕರೆದಿದೆ. ಉಭಯ ಸದನಗಳ ಪ್ರತಿಪಕ್ಷ ನಾಯಕರು, ವಿಧಾನಸಭೆ ಸ್ಪೀಕರ್, ವಿಧಾನ ಪರಿಷತ್ ಸಭಾಪತಿ ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಈ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಇದಕ್ಕೆ ಪೂರ್ವಭಾವಿಯಾಗಿ ಸರ್ಕಾರ ಸಂಭಾವ್ಯ ಹೆಸರುಗಳ ಬಗ್ಗೆ ಪರಿಶೀಲನೆ ಆರಂಭಿಸಿದೆ.

ಸಿಎಂ ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕರಾಗಿದ್ದ ಸಂದರ್ಭದಲ್ಲಿ ಎರಡು ಬಾರಿ ಎಸ್.ಆರ್.ನಾಯಕ್ ಅವರ ಹೆಸರನ್ನು ಪ್ರಸ್ತಾಪಿಸಿದ್ದರು. ಈಗಲೂ ಅವರು ನಾಯಕ್ ನೇಮಕಕ್ಕೆ ಒಲವು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಪೂರ್ವಾಪರ ಹಾಗೂ ಸೂಕ್ಷ್ಮ ವಿಚಾರಗಳ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಗುಪ್ತಚರ ಇಲಾಖೆಗೆ ಸೂಚಿಸಿದೆ. ಹೀಗಾಗಿ ಲೋಕಾಯುಕ್ತಕ್ಕೆ ಎಸ್.ಆರ್.ನಾಯಕ್ ನೇಮಕ ಸಾಧ್ಯತೆ ದಟ್ಟವಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಲೋಕಾಯುಕ್ತ ಗಾದಿಗೆ ಆಹ್ವಾನ ಬಂದಿಲ್ಲ: ಮಾನವ ಹಕ್ಕು ಆಯೋಗದ ಅ.ಧ್ಯಕ್ಷರಾದವರು ಲೋಕಾಯುಕ್ತರಾಗಬಾರದು ಎಂಬ ನಿಯಮವಿಲ್ಲ. ಆದರೆ ಲೋಕಾಯುಕ್ತ ಹುದ್ದೆ ಅಲಂಕರಿಸುವಿರಾ ? ಎಂದು ಸರ್ಕಾರ ಇದುವರೆಗೆ ನನ್ನನ್ನು ಸಂಪರ್ಕ ಮಾಡಿಲ್ಲ ಎಂದು ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ಎಸ್.ಆರ್.ನಾಯಕ್ ಹೇಳಿದ್ದಾರೆ. ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು ಲೋಕಸೇವಾ ಆಯೋಗ, ಆಡಳಿತ ನ್ಯಾಯ ಮಂಡಳಿ, ಮಾನವ ಹಕ್ಕು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರಾದವರು ಲೋಕಾಯುಕ್ತರಾಗಬಾರದು ಎಂಬ ನಿಯಮವೇ ಇಲ್ಲ. ಇಂಥ ಹುದ್ದೆ ಅಲಂಕರಿಸಿದವರು ಲೋಕಾಯುಕ್ತದಲ್ಲಿ ಉದ್ಯೋಗಿಯಾಗಬಾರದು ಎಂಬ ಉಲ್ಲೇಖ ಮಾತ್ರ ಕಾಯ್ದೆಯಲ್ಲಿದೆ. ನ್ಯಾ.ಭಗವತಿ ಅವರು ಈ ಹಿಂದೆಯೇ ಈ ಗೊಂದಲಕ್ಕೆ ಪರಿಹಾರ ನೀಡಿದ್ದಾರೆ. ಲೋಕಾಯುಕ್ತ, ರಾಜ್ಯಪಾಲ ಇತ್ಯಾದಿ ಸಂವಿಧಾನಾತ್ಮಕ ಹುದ್ದೆಗಳಿಗೆ ಸರ್ಕಾರ ನೇಮಕ ಮಾಡುತ್ತದೆಯೆ ಹೊರತು ಅದರಲ್ಲಿ ಅದೊಂದು ಉದ್ಯೋಗವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ನಿಯಮ ಇದ್ದಿದ್ದರೆ ನ್ಯಾ.ಎನ್.ವೆಂಕಟಾಚಲ, ನ್ಯಾ. ಶಿವರಾಜ್ ಪಾಟೀಲ್, ನ್ಯಾ. ವೈ.ಭಾಸ್ಕರ್ ರಾವ್ ಲೋಕಾಯುಕ್ತರಾಗಿ ನೇಮಕಗೊಳ್ಳುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಆದರೆ ಅದ್ಯಾವ ಬ್ರಹಸ್ಪತಿಯ ತಲೆಯಲ್ಲಿ ಈ ವಿಚಾರ ಉದುರಿತು ಎನ್ನುವುದು ಗೊತ್ತಿಲ್ಲ, ಮಾನವ ಹಕ್ಕು ಆಯೋಗದ ಅಧ್ಯಕ್ಷರಾದವರು ಲೋಕಾಯುಕ್ತರಾಗಬಾರದು ಎಂಬ ವಿಚಾರವನ್ನು ತೇಲಿ ಬಿಟ್ಟಿದ್ದಾರೆ. ನನ್ನನ್ನೇ ಉದ್ದೇಶಿಸಿ ಇಂಥ ವಿಷಯ ಪ್ರಸ್ತಾಪವಾಗಿದ್ದರಿಂದ ಸ್ಪಷ್ಟೀಕರಣ ನೀಡುತ್ತಿದ್ದೇನೆಯೆ ಹೊರತು ಇನ್ಯಾವ ಸಂಗತಿಯೂ ಇಲ್ಲ ಎಂದು ಹೇಳಿದರು.

ಪದಚ್ಯುತಿಗೆ ಮೀನಮೇಷ
ಉಪಲೋಕಾಯುಕ್ತ ನ್ಯಾ.ಸುಭಾಷ್ ಬಿ.ಆಡಿ ಪದಚ್ಯುತಿ ಪ್ರಸ್ತಾವವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಸಲ್ಲಿಸದೇ ಸ್ಪೀಕರ್ ಕಾಗೋಡು ತಿಮ್ಮಪ್ಪ ವಿಳಂಬ ಮಾಡುತ್ತಿದ್ದಾರೆ,'' ಎಂದು ಜನಾಧಿಕಾರ ಸಂಘರ್ಷ ಪರಿಷತ್‍ನ ಸಹ ಅಧ್ಯಕ್ಷ ಆದರ್ಶ ಅಯ್ಯರ್ ಆರೋಪಿಸಿದ್ದಾರೆ. ನ್ಯಾ.ಆಡಿ ಪದಚ್ಯುತಿಗೆ ಸಂಬಂಧಿಸಿದಂತೆ ನ.27ರಂದು 78ಶಾಸಕರು ಸಹಿ ಮಾಡಿದ್ದಾರೆ. ಈ ಪ್ರಕ್ರಿಯೆ ಆರಂಭವಾಗಿ 20ದಿನಗಳಾಗಿವೆ. ಆದರೂ ಸ್ಪೀಕರ್ ಪುರಾವೆಗಳು ಬೇಕು ಎಂದು ಸಬೂಬು ಹೇಳುತ್ತಿದ್ದಾರೆ. ಒಮ್ಮೆ ಪದಚ್ಯುತಿ ಪ್ರಕ್ರಿಯೆ ಆರಂಭಿಸಿದ ನಂತರ ದಾಖಲೆಗಳನ್ನು ಕೇಳುವುದು ಸರಿಯಲ್ಲ. ಕಾಗೋಡು ತಿಮ್ಮಪ್ಪ ಅವರು ಪದಚ್ಯುತಿ ಪ್ರಕ್ರಿಯೆ ಆರಂಭಿಸುವ ಮುನ್ನವೇ ಎಲ್ಲಾ ದಾಖಲೆಗಳನ್ನು ಪರಿಶೀಲಿಸಬೇಕಿತ್ತು. ಆದರೆ 15 ದಿನ ಕಳೆದ ನಂತರ ದಾಖಲೆಗಳನ್ನು ಕೇಳುತ್ತಿದ್ದಾರೆ, ಇದು ಸರಿಯಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com