

ನವದೆಹಲಿ: ಮಂಗಳೂರಿನಿಂದ ಮುಂಬೈಗೆ ಬಂದಿಳಿಯುತ್ತಿದ್ದ ಏರ್ ಇಂಡಿಯಾ ವಿಮಾನ ಮುಂಬೈ ವಿಮಾನ ನಿಲ್ದಾಣದಲ್ಲಿ ಕೂದಲೆಳೆಯ ಅಂತರದಿಂದ ಪಾರಾಗಿದೆ. ೧೯೪ ಜನ ಪ್ರಯಾಣಿಕರು ಹಾಗೂ ೭ ಜನ ಸಿಬ್ಬಂದಿ ಹೊತ್ತ ಈ ವಿಮಾನದ ಬಾಲ ರನ್ವೇ ಅನ್ನು ಸವರಿ ಅಪಾಯ ಸಂಭವಿಸುವುದರಿಂದ ಪಾರಾಯಿತು.
ಭಾನುವಾರದ ಘಟನೆಯನ್ನು ಧೃಡೀಕರಿಸಿದ ಏರ್ ಇಂಡಿಯಾ ವಕ್ತಾರ ವಿಮಾನ ಸಿಬ್ಬಂದಿಯನ್ನು ಈ ಘಟನೆಯ ಬಗ್ಗೆ ಡಿಜಿಸಿಎ(ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಶನ್) ತನಿಖೆಗೆ ಒಳಪಡಿಸಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ ಈ ವರದಿಗಳನ್ನಾಧರಿಸಿ ಏರ್ ಇಂಡಿಯ ಆಂತರಿಕ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಘಟನೆಯ ನಂತರ ಈ ಏರ್ಬಸ್ ೩೨೧ ವಿಮಾನವನ್ನು ಸ್ಥಗಿತಗೊಳಿಸಲಾಗಿದೆ.
ಸರ್ಕಾರದ ೩೦ ಸಾವಿರ ಕೋಟಿ ಸಹಾಯಧನದೊಂದಿಗೆ ಉಳಿದುಕೊಂಡಿರುವ ಈ ರಾಷ್ಟ್ರೀಯ ವಿಮಾನಯಾನದ ವಿವಿಧ ಕೊರತೆಗಳಿಂದ ಪ್ರಯಾಣಿಕರು ಹಲವು ತೊಂದರೆ ಅನುಭವಿಸುತ್ತಿದ್ದಾರೆ.
ಪ್ರಾದೇಶಿಕ ವಿಮಾನಯಾನಗಳ ಪೈಕಿ ಏರ್ ಇಂಡಿಯಾ ಅತಿ ಕಳಪೆ ಪ್ರದರ್ಶನ ತೋರುತ್ತಿದ್ದು ಕಳೆದ ವಾರದಲ್ಲೇ ವಿಮಾನಗಳು ೧ ರಿಂಗ ೯ ಘಂಟೆಗಳ ವಿಳಂಬ ಪ್ರಯಾಣ ಮಾಡಿವೆ.
ಸಿಬ್ಬಂದಿ ಕೊರತೆಯಿಂದ ಕಳೆದ ವಾರ ಇಂಡಿಯಾ-ಪಾಕಿಸ್ತಾನ ಕ್ರಿಕೆಟ್ ವಿಶ್ವಕಪ್ ಪಂದ್ಯ ನೋಡಲು ಏರ್ ಇಂಡಿಯಾ ವಿಮಾನ ಮೂಲಕ ಸಿಡ್ನಿ ತೆರಳಬೇಕಿದ್ದವರು ೧೦ ಘಂಟೆಗಳ ವಿಳಂಬದಿಂದ ಈ ಐತಿಹಾಸಿಕ ಗೆಲುವನ್ನು ನೋಡದೆ ನಿರಾಸೆಗೊಂಡಿದ್ದರು.
ಸಿಬ್ಬಂದಿಗಳ ಕಾರ್ಯದಕ್ಷತೆ ಕೊರತೆಯಿಂದ ವಿಮಾನ ವಿಳಂಬವಾದರೆ ಅವರ ವರಮಾನವನ್ನು ಕಡಿತಗೊಳಿಸಲಾಗುವುದು ಎಂಬ ಸರ್ಕಾರದ ಸೂಚನೆಯಿದ್ದರೂ ಕೂಡ ವಿಳಂಬಗಳು ಅವ್ಯಾಹತವಾಗಿ ಮುಂದುವರೆದಿವೆ.