

ನವದೆಹಲಿ: ಇಂದಿನಿಂದ ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗಿದೆ.
ರಾಷ್ಟ್ರಪತಿ ಭವನದಿಂದ ಸಂಸತ್ತಿಗೆ ಕುದುರೆ ಸಾರೂಟಿನಲ್ಲಿ ಪ್ರಣಬ್ ಮುಖರ್ಜಿ ಅವರನ್ನು ಕರೆತರೆಲಾಯಿತು. ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪತಿ ಅವರನ್ನು ಸ್ವಾಗತಿಸಿದರು.
ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ಭಾಷಣ ಮಾಡಿದ್ದು, ವಿಶ್ವಕ್ಕೆ ಇಂದು ಭಾರತದ ಅಭಿವೃದ್ಧಿ ಬೇಕಾಗಿದೆ. ಭಾರತೀಯರ ಕನಸು ನನಸು ಮಾಡಲು ಪ್ರಯತ್ನಿಸುತ್ತೇವೆ. ದೇಶದ ಜನರಿಗೆ ಭದ್ರತೆ ಒದಗಿಸಲು ಹಾಗೂ ಬಡವರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಮಂಗಳಯಾನ ಯಶಸ್ಸನ್ನು ಶ್ಲಾಘಿಸಿದ ಪ್ರಣಬ್ ಮುಖರ್ಜಿ, 2014ರ ಸೆಪ್ಟೆಂಬರ್ 24ರಂದು ಮಂಗಳಯಾನ ಯಶಸ್ವಿಯಾಗಿದ್ದು, ಬಾಹ್ಯಾಕಾಶ ಕ್ಷೇತ್ರಕ್ಕೂ ಕೇಂದ್ರ ಸರ್ಕಾರ ಕೊಡುಗೆ ನೀಡಿದೆ. ಬಾಹ್ಯಕಾಶ ಕ್ಷೇತ್ರದಲ್ಲಿ ಭಾರತ ಇನ್ನಷ್ಟು ಸಾಧಿಸಲಿದ್ದು, ಜಗತ್ತು ಬೆರಾಗಾಗುವಂತ ಯೋಜನೆಗಳು ನಮ್ಮ ಮುಂದಿವೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಉದ್ಯೋಗ ಸೃಷ್ಟಿ, ಜನದನಿ ಸೇರಿದಂತೆ ಇತರೆ ವಿಚಾರಗಳ ಕುರಿತು ರಾಷ್ಟ್ರಪತಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರ ಬದ್ಧವಾಗಿದೆ. ಕಪ್ಪು ಹಣದ ವಿಚಾರದಲ್ಲಿ ನಮ್ಮ ನಿರ್ಧಾರ ಕಠಿಣವಾಗಿದೆ. 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ನಮ್ಮ ಗುರಿ ಎಂದ ಅವರು ಎಲ್ಲರೂ ಒಟ್ಟುಗೂಡಿದರೆ, ಎಲ್ಲರ ಅಭಿವೃದ್ಧಿ ಸಾಧ್ಯ ಎಂದು ರಾಷ್ಟ್ರಪತಿ ಅಭಿಪ್ರಾಯಪಟ್ಟಿದ್ದಾರೆ.
ಪ್ರತಿಯೊಂದು ಮಗುವಿಗೂ ಶಿಕ್ಷಣ ನೀಡಲು ನಾವು ಬದ್ಧ. ಈಶಾನ್ಯ ರಾಜ್ಯಗಳಲ್ಲಿ ಶಿಕ್ಷಣಕ್ಕೆ ಆಧ್ಯತೆ ನೀಡಲಾಗಿದೆ. 2015 ಆಗಸ್ಟ್ 15ರೊಳಗೆ ದೇಶದ ಎಲ್ಲಾ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗುವುದು ಎಂದ ಅವರು, ಸರ್ಕಾರ ಕೆಲವು ರೈತರಿಂದ ಭೂಮಿಯನ್ನು ವಶಪಡಿಸಿಕೊಂಡಿದ್ದು, ರೈತರ ಭೂಮಿಯಲ್ಲಿ ಶಾಲೆ ಮತ್ತು ಆಸ್ಪತ್ರೆಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.
ವಿಶ್ವದಲ್ಲೇ ಅತಿ ಹೆಚ್ಚು ಯುವಜನಾಂಗ ಭಾರತದಲ್ಲಿದೆ. ಯುವಜನಾಂಗ ಅನಾವರಣವಾಗಬೇಕಿದೆ. ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ಯುವಜನಾಂಗ ಪಾತ್ರ ದೊಡ್ಡದು. ತಂತ್ರಜ್ಞಾನ ಬಳಸಿ ಅಭಿವೃದ್ಧಿ ಸಾಧಿಸಬೇಕಾಗಿದೆ. ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯ ಕಲ್ಪಿಸುವುದೇ ಸವಾಲಾಗಿದೆ ಎಂದು ಹೇಳಿದ್ದಾರೆ.
ಇನ್ನು ರೇಲ್ವೆ ಇಲಾಖೆಯಲ್ಲೂ ಹಲವು ಮಹತ್ತರ ಬದಲಾವಣೆಯಾಗಬೇಕಿದೆ. ರೇಲ್ವೆ ಇಲಾಖೆ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗವುದು. ರೇಲ್ವೆ ಪ್ರಯಾಣಿಕರ ರಕ್ಷಣೆಗೆ ಹೆಚ್ಚಿನ ಒತ್ತು ನೀಡುತ್ತೇವೆ ಎಂದು ಅವರು ತಿಳಿಸಿದ್ದಾರೆ.