

ನವದೆಹಲಿ: ಏಪ್ರಿಲ್ ತಿಂಗಳಲ್ಲಿ ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಎಂಬ ಸುದ್ದಿಯನ್ನು ಸೋನಿಯಾ ಗಾಂಧಿ ನಿರಾಕರಿಸಿಲ್ಲ. ಆದರೆ ತಾನು ಈ ನಿರ್ಧಾರ ತೆಗೆದುಕೊಳ್ಳುವ ಮುನ್ನ ನಾನು ಎಲ್ಲರಿಗೂ ತಿಳಿಸುತ್ತೇನೆ ಎಂದು ಮಾಧ್ಯಮದವರೊಂದಿಗೆ ಮಾತನಾಡಿದ ಸೋನಿಯಾ ಹೇಳಿದ್ದಾರೆ.
ಸಂಸತ್‌ನಲ್ಲಿ ರೇಲ್ವೇ ಬಜೆಟ್ ಮಂಡನೆಯಾಗುತ್ತಿದ್ದ ವೇಳೆ ರಾಹುಲ್ ಗಾಂಧಿ ರಜಾ ಹಾಕಿ ಹೋಗಿರುವುದರ ಬಗ್ಗೆ ವಿವಾದವೆಬ್ಬಿತ್ತು. ಅದೇ ವೇಳೆ ರಾಹುಲ್ ಗಾಂಧಿಗೆ ಏಪ್ರಿಲ್ ತಿಂಗಳಲ್ಲಿ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಪಕ್ಷದ ಹಿರಿಯ ಮುಖಂಡರೂ ಒಪ್ಪಿಗೆ ಸೂಚಿಸಿದ್ದಾರೆ.
130 ವರ್ಷ ಅನುಭವೀ ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿಯಲು ರಾಹುಲ್ ಸಮರ್ಥರು ಎಂದು ಕಾಂಗ್ರೆಸ್‌ನ ಹಿರಿಯ ನೇತಾರರಾದ ದಿಗ್ವಿಜಯ್ ಸಿಂಗ್ ಮತ್ತು ಕಮಲ್ ನಾಥ್ ಕೂಡಾ ಹೇಳಿದ್ದಾರೆ.
ಏತನ್ಮಧ್ಯೆ, ಅಧಿಕಾರ ಕೈಗೆತ್ತಿಕೊಳ್ಳುವ ಮುನ್ನ ಈ ಬಗ್ಗೆ ಯೋಚನೆ ಮಾಡಲು ರಾಹುಲ್‌ಗೆ ಕಾಲಾವಕಾಶ ಬೇಕು. ಅವರು ರಾಜಕಾರಣದಿಂದ ದೂರ ಹೋಗಿಲ್ಲ. ಮಾರ್ಚ್ 10ನೇ ತಾರೀಖಿಗೆ ಅವರು ವಾಪಾಸಾಗಲಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಣ್‌ದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.