

ಶಿಮ್ಲಾ: ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ಖಾಸಗಿ ಬಸ್ಸೊಂದು ರಸ್ತೆಯಿಂದ ಜಾರಿ ಕಣಿವಿಗೆ ಬಿದ್ದದ್ದರಿಂದ ಶುಕ್ರವಾರ ಕನಿಷ್ಠ ೬ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಹಾಗು ೧೮ ಜನ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯದ ರಾಜಧಾನಿಯಿಂದ ೧೨೫ ಕಿಮೀ ದೂರದಲ್ಲಿರುವ ದಲಾಶ್ ಬಳಿ ಬಸ್ಸು ಅಪಘಾತಕ್ಕೀಡಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗಳಿಗೆ ಸೇರಿಸಲಾಗಿದ್ದು, ಸತ್ತವರಲ್ಲಿ ಬಹುತೇಕರು ಅಲ್ಲಿನ ನಿವಾಸಿಗಳೇ ಎನ್ನಲಾಗಿದೆ.
ಕೆಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ತಿರುವಿನ ಬಳಿ ಚಾಲಕ ನಿಯಂತ್ರಣ ಕಳೆದುಕೊಂಡದ್ದರಿಂದ ಅಪಘಾತವಾಗಿದೆ ಎಂದು ಬದುಕುಳಿದ ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.