

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ)ದ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಿತ ಕೆಎಎಸ್ ಅಧಿಕಾರಿ ಆಶಾ ಪರ್ವಿನ್ ಹಾಗೂ ಸಲ್ಮಾ ಫಿರ್ದೋಸ್ ಸೇರಿದಂತೆ ಐವರು ವಿರುದ್ಧದ ಪ್ರಕರಣಗಳನ್ನು ಹೈಕೋರ್ಟ್ ಏಕ ಸದಸ್ಯ ಪೀಠ ಗುರುವಾರ ರದ್ದುಗೊಳಿಸಿದೆ.
1998ರ ಕೆಪಿಎಸ್‌ಸಿ ಅಕ್ರಮ ನೇಮಕಾತಿ ಪ್ರಕರಣ ಸಂಬಂಧ ಆಶಾ ಪರ್ವಿನ್, ಸಲ್ಮಾ ಫಿರ್ದೊಷ್, ಪಿ.ಗೋಪಿಕೃಷ್ಣ, ಎಂ.ಬಿ.ಬಣಕಾರ ಹಾಗೂ ಕೆ.ನರಸಿಂಹ ಸೇರಿದಂತೆ 19 ಅಧಿಕಾರಿಗಳ ವಿರುದ್ಧ ಸಿಐಡಿ ಎಫ್‌ಐಆರ್ ದಾಖಲಿಸಿ, ಚಾರ್ಜ್‌ಶೀಟ್ ಸಲ್ಲಿಸಿತ್ತು.
ನಕಲಿ ಜಾತಿ ಪ್ರಮಾಣ ಪತ್ರ, ದಾಖಲೆಗಳನ್ನು ತಿದ್ದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಕೆಪಿಎಸ್‌ಸಿ ಸದಸ್ಯರು ಹಾಗೂ ಅಧಿಕಾರಿಗಳು ಅಧಿಕಾರ ದುರುಪಯೋಗ ಮಾಡಿಕೊಂಡು ಕೆಲವರ ಪರವಾಗಿ ಸಂದರ್ಶನ ಹಾಗೂ ಪರೀಕ್ಷೆಯಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂದು ಸಿಐಡಿ ಆರೋಪಿಸಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ, ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದ ಹಿನ್ನೆಲೆಯಲ್ಲಿ ಇಂದು ಆಶಾ ಪರ್ವಿನ್, ಸಲ್ಮಾ ಫಿರ್ದೊಷ್, ಪಿ.ಗೋಪಿಕೃಷ್ಣ, ಎಂ.ಬಿ.ಬಣಕಾರ ಹಾಗೂ ಕೆ.ನರಸಿಂಹ ವಿರುದ್ಧದ ಕೇಸ್ ಗಳನ್ನು ರದ್ದುಗೊಳಿಸಿ ತೀರ್ಪು ನೀಡಿದೆ.