

ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇನ್ನು ವೈದ್ಯರ ಕೊರತೆ ಇರುವುದಿಲ್ಲ. ಕಾರಣ, ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ಪೂರ್ತಿಗೊಳಿಸಿದ ವಿದ್ಯಾರ್ಥಿಗಳು ಕಡ್ಡಾಯವಾಗಿ ಒಂದು ವರ್ಷ ಸರ್ಕಾರಿ ಆರೋಗ್ಯ ವ್ಯವಸ್ಥೆಯಡಿ `ಸೇವಾ ತರಬೇತಿ' ಹೆಸರಿನಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಎಂಬಿಬಿಎಸ್, ಎಂಡಿ ಅಥವಾ ಇನ್ಯಾವುದೇ ವೈದ್ಯ ಪದವಿ ಪಡೆಯುವ ಅಭ್ಯರ್ಥಿಗಳು ಸರ್ಕಾರದ ನಿರ್ದೇಶನದಂತೆ ಸರ್ಕಾರಿ ಆರೋಗ್ಯ ಸೇವೆಯಲ್ಲಿ ತೊಡಗಿಕೊಳ್ಳಬೇಕು. ಗ್ರಾಮೀಣ ಸೇವೆಗೆ ನಿಯೋಜಿಸಿದರೆ ಅಲ್ಲಿ ಕಾರ್ಯನಿರ್ವಹಿಸುವುದೂ ಕಡ್ಡಾಯವಾಗಲಿದೆ.
2012ರಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವು `ಕರ್ನಾಟಕ ವೈದ್ಯಕೀಯ ಕೋರ್ಸ್‍ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ತರಬೇತಿ ವಿಧೇಯಕ-2012' ಅನ್ನು ಸದನದಲ್ಲಿ ಮಂಡಿಸಿ ಒಪ್ಪಿಗೆ ಪಡೆದು, ಕೇಂದ್ರ ಗೃಹ ಸಚಿವಾಲಯದ ಒಪ್ಪಿಗೆಗೆ ಕಳುಹಿಸಿತ್ತು. ರಾಷ್ಟ್ರಪತಿ ಅಂಕಿತಕ್ಕೆಈ ವಿಧೇಯಕ ಕಾಯುತ್ತಿತ್ತು. ರಾಷ್ಟ್ರಪತಿ ಅಂಕಿತ ಹಾಕಿದ್ದು, 2015-16ನೇ ಸಾಲಿನಿಂದ ಕಾಯ್ದೆಯಾಗಿ ಜಾರಿಯಾಗಲಿದೆ. ಜೂ. 2ರಂದು ಕೇಂದ್ರವು ರಾಜ್ಯ ಸರ್ಕಾರದ ಒತ್ತಾಸೆಗೆ ಒಪ್ಪಿಗೆ ನೀಡಿ ಆದೇಶ ಹೊರಡಿಸಿದೆ.
ಆಶಯವೇನು?
ರಾಜ್ಯದ ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆ ವ್ಯವಸ್ಥೆ ಮೊದಲಿನಿಂದಲೂ ಕೊರತೆಯಿಂದಲೇ ಕೂಡಿದೆ. ಇದು ವರ್ಷದಿಂದ ವರ್ಷಕ್ಕೆ ಬಿಗಡಾಯಿಸಿತು. ಗ್ರಾಮೀಣ ಭಾಗದ ಆರೋಗ್ಯ ಕೇಂದ್ರಗಳಿಗೆ ವೈದ್ಯರನ್ನು ನಿಯೋಜಿಸುವುದು, ಅವರನ್ನು ಸರ್ಕಾರಿ ಸೇವೆಯಲ್ಲಿ ಬಳಸಿಕೊಳ್ಳುವುದು ಸರ್ಕಾರಕ್ಕೆ ದುಸ್ತರವಾಯಿತು. ಎಷ್ಟು ವೇತನ, ಭತ್ಯೆ ನೀಡಿದರೂ ಸರ್ಕಾರಿ ಸೇವೆ ಹಾಗೂ ಗ್ರಾಮೀಣ ಭಾಗಕ್ಕೆ ತೆರಳಲು ಹಿಂದೇಟು ಹಾಕತೊಡಗಿದರು. ಈ ಕಾರಣಕ್ಕೆ ಕಾಯ್ದೆ ಮೂಲಕ ಪರಿಸ್ಥಿತಿ ನಿಯಂತ್ರಿಸಲು ಸರ್ಕಾರ ಮುಂದಾಯಿತು. ಇದಕ್ಕಾಗಿ ರಾಜ್ಯದಲ್ಲಿ ವೈದ್ಯಕೀಯ ಕೋರ್ಸ್‍ಗಳನ್ನು ಪೂರೈಸುವ ಅಭ್ಯರ್ಥಿಗಳು ಒಂದು ವರ್ಷ ಕಡ್ಡಾಯವಾಗಿ ತರಬೇತಿ ರೂಪದಲ್ಲಿ ಸರ್ಕಾರಿ ವೈದ್ಯಕೀಯ ಸೇವೆಯಲ್ಲಿ ತೊಡಗಿಕೊಳ್ಳಲೇಬೇಕು ಎಂದು ನಿರ್ಧರಿಸಿದ ಸರ್ಕಾರ ಇದಕ್ಕಾಗಿ ಸದನದಲ್ಲಿ ವಿಧೇಯಕ ಮಂಡಿಸಿ ಒಪ್ಪಿಗೆಯನ್ನೂ ಪಡೆದುಕೊಂಡಿತು. ಅದೀಗ ಅನುಷ್ಠಾನಕ್ಕೆ ಬರುತ್ತಿದೆ.
ಸದ್ಯವೇ ಆರೋಗ್ಯ ಇಲಾಖೆ ಸಚಿವರೊಂದಿಗೆ ಮಾತುಕತೆ ನಡೆಸಿ, ಈ ಶೈಕ್ಷಣಿಕ ವರ್ಷದಲ್ಲಿ ಪದವಿ ಪೂರೈಸಿದ ವೈದ್ಯರನ್ನು ಸೇವೆಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಹೀಗೆ ವೈದ್ಯರನ್ನು ಬಳಸಿಕೊಂಡಿದ್ದೇ ಆದಲ್ಲಿ, ಇದು ಮಹತ್ವದ ಮೈಲುಗಲ್ಲಾಗುತ್ತದೆ. ರಾಜ್ಯದ ಸರ್ಕಾರಿ ಆರೋಗ್ಯ ಸೇವೆಯಲ್ಲಿ
ವೈದ್ಯರ ಕೊರತೆಯೇ ಇರುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲï ತಿಳಿಸಿದರು.
ಮುಂದೇನು?: ಇನ್ನು ಮುಂದೆ ವೈದ್ಯಕೀಯ ಕೋರ್ಸ್ ಪೂರೈಸುವ ಅಭ್ಯರ್ಥಿಗಳು ಒಂದು ವರ್ಷ ಸರ್ಕಾರಿ ಸೇವೆ ಸಲ್ಲಿಸಲೇಬೇಕಾಗುತ್ತದೆ. ಈ ಸೇವೆಗೆ ಸರ್ಕಾರದಿಂದ ಹಣ ಪಾವತಿಯಾಗುತ್ತದೆ. ಈ ಒಂದು ವರ್ಷದ ಅವ„ಯ ಸೇವೆಯನ್ನು ತರಬೇತಿ ಎಂದು ಪರಿಗಣಿಸಲಾಗುತ್ತದೆ.
ಸೇವೆಯಂತೂ ಕಡ್ಡಾಯ: ಹಲವು ವಿದ್ಯಾರ್ಥಿಗಳು ಎಂಬಿಬಿಎಸ್ ಮುಗಿಸಿ ತಕ್ಷಣವೇ ಸ್ನಾತಕೋತ್ತರ ಪದವಿ ಕೋರ್ಸ್‍ಗೆ ಹೋಗುವವರಿರುತ್ತಾರೆ. ಅಂತಹವರು ತಕ್ಷಣವೇ ಗ್ರಾಮೀಣ ಸೇವೆಗೆ ಹೋಗುವ ಅವಶ್ಯಕತೆ ಇಲ್ಲ. ಆದರೆ, ಸ್ನಾತಕೋತ್ತರ ಪದವಿ ಮುಗಿದ ನಂತರ ಮತ್ತೆ ಒಂದು ವರ್ಷ ಸರ್ಕಾರಿ ಸೇವೆ ಸಲ್ಲಿಸಲೇಬೇಕಾಗುತ್ತದೆ. ಹೀಗೆ ಸೇವೆ ಸಲ್ಲಿಸಿದ ನಂತರವಷ್ಟೇ ಪದವಿ ಪ್ರಮಾಣ ಪತ್ರ ಅಭ್ಯರ್ಥಿಗಳ ಕೈ ಸೇರುತ್ತದೆ.
ಕಡ್ಡಾಯದ ಪರಿಣಾಮ
- ಹೊಸ ಕಾಯಿದೆಯಂತೆ ಕೋರ್ಸ್ ಅವಧಿ ಒಂದು ವರ್ಷ ಕಡ್ಡಾಯ ಗ್ರಾಮೀಣ ಸೇವೆ ಸೇರಿಸಿ 6 ವರ್ಷ.
- ನೇರ ಸ್ನಾತಕೋತ್ತರ ಕೋರ್ಸ್ ಪ್ರವೇಶ ಪಡೆಯುವವರು,ಮುಗಿದ ಬಳಿಕ ಒಂದು ವರ್ಷ ಸೇವೆ ಸಲ್ಲಿಸಲೇಬೇಕು.
- ಗ್ರಾಮೀಣ ಸೇವೆ ನಿರಾಕರಿಸಿದರೆ ಪದವಿ ಪ್ರಮಾಣಪತ್ರ ವಿತರಿಸುವುದಿಲ್ಲ.
- ರಾಜ್ಯದಲ್ಲಿ ವೈದ್ಯ ಸೇವೆಗೆ ನೋಂದಣಿಗೂ ಅವಕಾಶವಿಲ್ಲ. ಕಾಯ್ದೆಯಲ್ಲಿ ದಂಡದ ಮಾಹಿತಿ
- ಎಂಬಿಬಿಎಸ್ ವಿದ್ಯಾರ್ಥಿಗಳಿಗೆ - ರು.15 ಲಕ್ಷ
- ಪಿ.ಜಿ. ಡಿಪ್ಲೋಮೋ - ರು. 25 ಲಕ್ಷ
- ಎಂ.ಡಿ. - ರು. 25 ಲಕ್ಷ. ಜತೆಗೆ ಪ್ರಮಾಣಪತ್ರವೂ ಸಿಗಲ್ಲ ಗೌರವಧನ(ಮಾಸಿಕ)
- ಎಂಬಿಬಿಎಸ್ ಮಾಡಿದವರಿಗೆ - ರು. 29,962