

ಹೈದರಾಬಾದ್: ನೋಟಿಗಾಗಿ ಓಟು ಹಗರಣದಲ್ಲಿ ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ-ಆಂಟಿ ಕರಪ್ಷನ್ ಬ್ಯುರೊ) ತಮ್ಮ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇಯಾದರೆ ಮುಂಖ್ಯಮಂತ್ರಿ ಸ್ಥಾನ ತ್ಯಜಿಸಲು ಎನ್. ಚಂದ್ರಬಾಬು ನಾಯ್ಡು ಅವರು ಯೋಚಿಸುತ್ತಿದ್ದಾರೆ ಎನ್ನಲಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಒಂದು ವೇಳೆ ತಮ್ಮ ವಿರುದ್ಧ ಎಫ್‌ಐಆರ್ ದಾಖಲಿಸಿದರೆ, ನಾಯ್ಡು ಅವರು ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿ, ತಮ್ಮ ನಂಬಿಕಸ್ಥ ಹಾಗೂ ಕೇಂದ್ರ ವಿಮಾನಯಾನ ಖಾತೆ ಸಚಿವ ಅಶೋಕ್ ಗಜಪತಿರಾಜು ಅವರನ್ನು ಮುಖ್ಯಮಂತ್ರಿ ಹುದ್ದೆಗೆ ತರಲು ನಿರ್ಧರಿಸಿದ್ದಾರೆ.
ಈ ಮಧ್ಯೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ತೆಲಂಗಾಣ ಎಸಿಬಿ, ಇಂದು ಹೆಚ್ಚುವರಿ ಎಫ್‌ಐಆರ್ ದಾಖಲಿಸಲು ನ್ಯಾಯಾಲಯದ ಅನುಮತಿ ಕೋರುವ ಸಾಧ್ಯತೆಗಳಿವೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಚಂದ್ರಬಾಬು ನಾಯ್ಡು ಅವರು, ಹಿರಿಯ ಅಧಿಕಾರಿಗಳ ಹಾಗೂ ಸಂಪುಟ ಸಹೋದ್ಯೋಗಿಗಳ ಜತೆ ದೀರ್ಘಾವಧಿ ಸಭೆಗಳನ್ನು ನಡೆಸುತ್ತಿದ್ದಾರೆ.
ತಮ್ಮ ವಿರುದ್ಧ ಎಫ್‌ಐಆರ್ ದಾಖಲಾಗಿದ್ದೇ ಆದರೆ, ಗಜಪತಿ ರಾಜು ಅವರು ತಮ್ಮ ಹುದ್ದೆಗೇರಲಿದ್ದಾರೆ ಎಂಬ ವಿಷಯವನ್ನು ನಾಯ್ಡು ಅವರು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಗಮನಕ್ಕೆ ತಂದಿದ್ದಾರೆ ಎಂದು ವರದಿ ಮಾಡಲಾಗಿದೆ.