

ನವದೆಹಲಿ: ತನ್ನ ಎರಡು ಸಂಸ್ಥೆಗಳಾದ ಎಸ್ ಐ ಆರ್ ಇ ಸಿ ಎಲ್ ಮತ್ತು ಎಸ್ ಎಚ್ ಎಫ್ ಸಿ ಎಲ್ ಗಳಿಗಾಗಿ ೨೦೦೭-೨೦೦೮ ರಲ್ಲಿ ಹೂಡಿಕೆದಾರರಿಂದ ಸಂಗ್ರಹಿಸಿದ್ದ ೩೬,೦೦೦ ಕೋಟಿ ರೂಗಳನ್ನು ಹಿಂದಿರುಗಿಸುವುದಕ್ಕೆ ಸುಪ್ರೀಮ್ ಕೋರ್ಟ್ ಸಹರಾ ಸಂಸ್ಥೆಗೆ ೧೮ ತಿಂಗಳುಗಳ ಕಾಲ ಗಡವು ನೀಡಿದೆ.
ಹೀಗಿದ್ದೂ, ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಸಹರಾ ಅಧ್ಯಕ್ಷ ಸುಬ್ರತಾ ರಾಯ್ ಮತ್ತಿಬ್ಬರು ನಿರ್ದೇಶಕರನ್ನು ತಿಹಾರ್ ಜೈಲಿನಿಂದ ಬಿಡುಗಡೆ ಮಾಡಲು ೫೦೦೦ ಕೋಟಿ ರೂ ನಗದು ಜಮಾಯಿಸಬೇಕು ಮತ್ತು ಅದಕ್ಕೆ ಬ್ಯಾಂಕ್ ಭರವಸೆ ನೀಡಬೇಕು ಎಂಬ ಮಾರ್ಚ್ ೨೬ ೨೦೧೪ ರ ತೀರ್ಪನ್ನು ಟಿ ಎಸ್ ಠಾಕುರ್ ಮುಂದಾಳತ್ವದ ನ್ಯಾಯಪೀಠ ಎತ್ತಿಹಿಡಿದಿದೆ.
ಪ್ರತಿ ಎರಡು ತಿಂಗಳಿಗೊಮ್ಮೆ ೩೦೦೦ ಕೋಟಿ ರೂಗಳನ್ನು ಜಮಾಯಿಸಬೇಕು ಮತ್ತು ಗಡುವಿನ ಕೊನೆಯಲ್ಲಿ ಉಳಿದ ಸಂಪೂರ್ಣ ಮೊತ್ತವನ್ನು ಪಾವತಿಸಬೇಕು ಎಂದು ಕೋರ್ಟ್ ಸೂಚಿಸಿದೆ.
ಎರಡು ಬಾರಿ ಈ ಮೊತ್ತವನ್ನು ಜಮಾಯಿಸುವುದರಿಂದ ಸಹರಾ ತಪ್ಪಿಸಿಕೊಂಡರೆ ಭರವಸೆಯಾಗಿ ನೀಡಿರುವ ೫೦೦೦ ಕೋಟಿ ಮೊತ್ತವನ್ನು ಸೇಬಿ ನಗದು ಮಾಡಿಕೊಳ್ಳಲಿದೆ. ಮೂರು ಬಾರಿ ತಪ್ಪಿಸಿಕೊಂಡರೆ ಸುಬ್ರತಾ ರಾಯ್ ಮತ್ತು ನಿರ್ದೇಶಕರು ತಿಹಾರ ಜೈಲು ಅಧಿಕಾರಿಗಳ ಮುಂದೆ ಶರಣಾಗಬೇಕು. ಇಲ್ಲವಾದಲ್ಲಿ ಪೊಲೀಸರು ಅವರನ್ನು ಮತ್ತೆ ಬಂಧಿಸಲಿದ್ದಾರೆ ಎಂದು ಕೋರ್ಟ್ ತಿಳಿಸಿದೆ.
ಬಿಡುಗಡೆಗೂ ೧೫ ದಿನಗಳ ಮುಂಚಿತವಾಗಿ ರಾಯ್ ಅವರು ತಮ್ಮ ಪಾಸ್ಪೋರ್ಟ್ ಪೊಲೀಸ ವಶಕ್ಕೆ ನೀಡಬೇಕು. ಮತ್ತು ತಮ್ಮ ಇರುವಿಕೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು ಮತ್ತು ಯಾವುದೇ ಕಾರಣಕ್ಕೂ ದೇಶ ಬಿಟ್ಟು ಹೊರಗೆ ಹೋಗಬಾರದೆಂಬ ಷರತ್ತನ್ನು ಕೋರ್ಟ್ ವಿಧಿಸಿದೆ.
೫೦೦೦ ಕೋಟಿ ರೂ ಭರವಸೆ ನೀಡಲು ಒಪ್ಪಿಕೊಂಡಿದ್ದ ಬ್ಯಾಂಕ್ ಹಿಂದೆ ಸರಿಸಿರುವುದರಿಂದ ಸುಬ್ರತಾ ರಾಯ್ ಅವರ ಬಿಡುಗಡೆ ಲಕ್ಷಣಗಳು ಕ್ಷೀಣಿಸಿವೆ ಎನ್ನಲಾಗಿದೆ. ಈಗ ಬೇರೆ ಬ್ಯಾಂಕುಗಳ ಜೊತೆ ಮಾತುಕತೆ ನಡೆಸಲಾಗಿದೆ ಎಂದು ರಾಯ್ ಅವರ ವಕೀಲ ಕಪಿಲ್ ಸಿಬಲ್ ತಿಳಿಸಿದ್ದಾರೆ.