

ನವದೆಹಲಿ: ಕಾಂಗ್ರೆಸ್ ಪಕ್ಷದ ಮುಖವಾಣಿಯಾಗಿದ್ದ ದಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಕಾಶನ ಸಂಸ್ಥೆ ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್‍ನ ಷೇರುಗಳ ವರ್ಗಾವಣಿಯಿಂದ ಗಳಿಸಿರುವ ಆದಾಯಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡುವ ಸಾಧ್ಯತೆಗಳಿವೆ.
ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್ (ಎಜೆಎಲ್)ನ ಷೇರುಗಳ ವರ್ಗಾವಣೆಯಿಂದ ರು.1,300 ಕೋಟಿ ಗಳಿಸಿರಬಹುದೆಂದು ಈ ಕುರಿತು ತನಿಖೆ ನಡೆಸಿದವರು ಭಾವಿಸಿದ್ದು ಈ ಹಣಕ್ಕೆ ತೆರಿಗೆ ಅಥವಾ ದಂಡ ಪಾವತಿಸಿ ಎಂದು ನೋಟಿಸ್‍ನಲ್ಲಿ ಹೇಳಬಹುದು ಎನ್ನಲಾಗಿದೆ.
ಹೊಸದಾಗಿ ಸ್ಥಾಪಿಸಿರುವ ಯಂಗ್ ಇಂಡಿಯಾ ಲಿಮಿಟೆಡ್‍ಗೆ ಎಜೆಎಲ್ ಷೇರುಗಳ ವರ್ಗಾವಣೆ ಮಾಡುವಾಗ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಎಜೆಎಲ್‍ನ ಸ್ವತ್ತಿನ ಕುರಿತು ತಪ್ಪುಮಾಹಿತಿ ನೀಡಿದ್ದಾರೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ ದೂರಿನಂತೆ ತನಿಖೆ ನಡೆಸಲಾಗಿದೆ. ಆದಾಯ ತೆರಿಗೆ ಇಲಾಖೆಯಲ್ಲಿನ ದಾಖಲೆಗಳ ಪ್ರಕಾರ ಯಂಗ್ ಇಂಡಿಯಾದಲ್ಲಿ ಶೇ.83.3ರಷ್ಟು ಪಾಲು ಸೋನಿಯಾ ಮತ್ತು ರಾಹುಲ್ ಹೊಂದಿದ್ದರೆ ಶೇ.15.5ರಷ್ಟು ಷೇರನ್ನು ಮೋತಿಲಾಲ್ ವೋರಾ ಮತ್ತು ಶೇ.1.2ರಷ್ಟು ಆಸ್ಕರ್ ಫರ್ನಾಂಡಿಸ್ ಹೊಂದಿದ್ದಾರೆ.