
ಬೆಂಗಳೂರು: ಸಕ್ಕರೆ ಕಾರ್ಖಾನೆಗಳಲ್ಲಿರುವ ಸಕ್ಕರೆ ಜಪ್ತಿ ಮಾಡುತ್ತಾರೋ, ಅದನ್ನು ಮಾರಾಟ ಮಾಡುತ್ತಾರೋ, ಕೇಂದ್ರದಿಂದ ಓವರ್ ಡ್ರಾಫ್ಟ್ ತರುತ್ತಾರೋ ಗೊತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿ ಅಧಿವೇಶನ ಆರಂಭವಾಗುವುದಕ್ಕೆ ಮುನ್ನ ಕಬ್ಬು ಬೆಳೆಗಾರರು ಬಾಕಿ ಹಣವನ್ನು ಬಿಡುಗಡೆ ಮಾಡಬೇಕು ಎಂದು ಅವರನ್ನು ವಿನಂತಿಸುತ್ತೇನೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಮುಖ್ಯಮಂತ್ರಿಯವರು ಯಾವ ಕಾರ್ಯಕ್ರಮಗಳನ್ನಾದರೂ (ಭಾಗ್ಯ) ನೀಡಲಿ. ರೈತ ಕುಟುಂಬದವರೂ ಆಗಿರುವ ಸಿದ್ದರಾಮಯ್ಯ ಅವರಿಗೆ ರೈತರ ಸಂಕಷ್ಟದ ಅರಿವಿದೆ ಎಂದು ಭಾವಿಸಿದ್ದೇನೆ. ಎರಡು ವರ್ಷದಿಂದ ಕಬ್ಬು ಬೆಳೆಗಾರರ ಸಮಸ್ಯೆಗೆ ಪರಿಹಾರ ಘೋಷಿಸಲಾಗುತ್ತಿದೆ, ಆದರೆ ನೀಡಲಾಗುತ್ತಿಲ್ಲ. ಬೆಳಗಾವಿ ಅಧಿವೇಶನ ಆರಂಭಕ್ಕೆ ಮುನ್ನ ಸರ್ಕಾರದಿಂದಲೇ ಬಿಡುಗಡೆಗೆ ಮುಖ್ಯಮಂತ್ರಿ ಕ್ರಮ ಕೈಗೊಳ್ಳಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಆಗ್ರಹಿಸಿದರು.
ಸರ್ಕಾರದ ನೆರವು ಬೇಕು
ಸಿದ್ದರಾಮಯ್ಯ ಅವರಿಗೆ ನನ್ನ ಜತೆ ಕೆಲಸ ಮಾಡಿದ ಅನುಭವ ಇದೆ. ಈ ಹಿಂದೆ ನಾವು ರೈತರಿಗಾಗಿ ಒಂದು ಸಾವಿರ ಕೋಟಿಯ `ಕಾರ್ಪಸ್ ಫಂಡ್' ಮಾಡಿದ್ದೆವು. ಯಾವುದೇ ಬೆಳೆ ಹಾನಿ ಅಥವಾ ಬೆಲೆ ಕುಸಿದ ಸಂದರ್ಭದಲ್ಲಿ ಅದಕ್ಕೆ ಪರಿಹಾರ ಕಲ್ಪಿಸುವುದು ಅದರ ಉದ್ದೇಶವಾಗಿತ್ತು. ಕಬ್ಬು ಬೆಳೆಗೆ ಬದಲಾಗಿ ಇತರೆ ಬೆಳೆ ಬೆಳೆಯಿರಿ ಎನ್ನಲಾಗುತ್ತಿದೆ. ಬೇರೆ ಬೆಳೆಗಳಲ್ಲೂ ಸಂಕಷ್ಟ ಇದೆ. ಹೀಗಾಗಿ ರೈತರ ಸಂಕಷ್ಟಕ್ಕೆ ಸರ್ಕಾರಗಳು ಸೂಕ್ತ ಕ್ರಮ ವಹಿಸಲೇಬೇಕು ಎಂದು ಹೇಳಿದರು.
ಕೇಂದ್ರವೂ ಕಾಳಜಿ ವಹಿಸಲಿ
ಪ್ರಧಾನಿ ನರೇಂದ್ರ ಮೋದಿ ಅವರು ಸ್ಮಾರ್ಟ್ ಸಿಟಿ, ಅಮೃತ್ ನಗರ ಎಂದೆಲ್ಲ ಮಾಡುತ್ತಿದ್ದಾರೆ, ಮಾಡಲಿ. ಆದರೆ ರೈತರಿಗೆ ಸಂಬಂಧಿಸಿದ ಒಂದೇ ಒಂದು ಯೋಜನೆ ರೂಪಿಸಿಲ್ಲ. ರೈತರನ್ನು ಕಡೆಗಣಿಸಿದ್ದಾರೆ. ಈ ಬಗ್ಗೆ ನಾನು ಅವರನ್ನು ಭೇಟಿಯಾದ ಸಂದರ್ಭದಲ್ಲೇ ಖಂಡತುಂಡವಾಗಿ ಹೇಳಿದ್ದೇನೆ. ರೈತರನ್ನು ಅಲಕ್ಷ್ಯಿಸುತ್ತಿದ್ದೀರ, ವಿಶ್ವಾಸ ಉಳಿಯುತ್ತಿಲ್ಲ. ನೀವು ನೋಡಲು ಸಾಧ್ಯವಾಗದಿದ್ದರೆ ನಿಮ್ಮ ಮಂತ್ರಿಗಳೇನು ಮಾಡುತ್ತಿದ್ದಾರೆ. ಅವರಿಗೆ ಸೂಚನೆ ನೀಡಿ ಎಂದು ಹೇಳಿದ್ದೇನೆ. ನಾನು ಕಾಫಿ-ಟೀ ಕುಡಿಯಲು ಪ್ರಧಾನಿ ಅವರನ್ನು ಭೇಟಿ ಮಾಡಿರಲಿಲ್ಲ. ರೈತನ ಮಗನಾಗಿ ಭೇಟಿ ಮಾಡಿ ರೈತ ಸಂಕಷ್ಟ ಪರಿಹರಿಸಲು ಹೇಳಿದ್ದೇನೆ ಎಂದು ಎಚ್.ಡಿ. ದೇವೇಗೌಡ ಹೇಳಿದರು.
ರೋಟಿ, ಮಕಾನ್, ಕಪಡಾವನ್ನೂ ನೋಡಿದ್ದೇನೆ, ಗರೀಬಿ ಹಠಾವೋ ಅನ್ನೂ ನೋಡಿದ್ದೇನೆ. ಆದರೆ, ಕೇಂದ್ರ ಸರ್ಕಾರ ಕೇವಲ ಆರೋಗ್ಯಕರ ಮಣ್ಣು ರೂಪಿಸುವ ಕೆಲಸವನ್ನಷ್ಟೇ ಮಾಡಿದರೆ ರೈತರ ಬಗ್ಗೆ ಕಾಳಜಿ ಏನು ಉಳಿಯುತ್ತದೆ. ರೈತರಿಗೆ ನೇರವಾಗಿ ಸಬ್ಸಿಡಿ ಹಣ ಪಾವತಿ ಎಂದು ಯುಪಿಎ ಸರ್ಕಾರ ನೀತಿ ಮಾಡಿತ್ತು. ಇವರು ಬಂದು ಒಂದು ವರ್ಷವಾದರೂ ಅದು ಸಾಧ್ಯವಾಗಿಲ್ಲ ಎಂದರು.
Advertisement