ರೈತರ ಆತ್ಮಹತ್ಯೆಯಿಂದ ಪಾಠ ಕಲಿಯುವರೇ?

ಸಮಸ್ಯೆ ದಿನೇ ದಿನೇ ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ ನೊಂದ ಹಾಗೂ ಆತ್ಮಸ್ಥೈರ್ಯ ಕಳೆದುಕೊಂಡ ರೈತರು ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಸಮಸ್ಯೆ ದಿನೇ ದಿನೇ ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ ನೊಂದ ಹಾಗೂ ಆತ್ಮಸ್ಥೈರ್ಯ ಕಳೆದುಕೊಂಡ ರೈತರು ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ.

ಇದನ್ನು ತಡೆಯಲಾಗದೇ ರಾಜ್ಯ ಸರ್ಕಾರ ಹೈರಾಣಾಗಿರುವುದು ಇದೇ ಮೊದಲಲ್ಲ. ಹಿಂದೆ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಸತತ  ನಾಲ್ಕು ವರ್ಷ ಕಾಡಿದ ಬರಗಾಲದಿಂದ ಕಂಗೆಟ್ಟ  ಅನ್ನದಾತರು ಆತ್ಮಹತ್ಯೆಯ ದಾರಿ ತುಳಿದಿದ್ದರು. ಇದು ರಾಷ್ಟ್ರವ್ಯಾಪಿ ಸಾಕಷ್ಟು ಸುದ್ದಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ಸರ್ಕಾರ ರೈತರ ಆತ್ಮಹತ್ಯೆ ಬಗ್ಗೆ ಅಧ್ಯಯನ ನಡೆಸುವುದಕ್ಕೆ ಡಾ. ವೀರೇಶ್ ಸಮಿತಿ ರಚಿಸಿತು. ಆದರೆ, 2010ರಲ್ಲಿ ಸಲ್ಲಿಕೆಯಾದ ಆ ಸಮಿತಿಯ ವರದಿಗಳನ್ನು ಸರ್ಕಾರ ಇದು ವರೆಗೆ ಒಪ್ಪಿಕೊಂಡಿಲ್ಲ, ನಿರಾಕರಿಸಿಯೂ ಇಲ್ಲ.

ರಾಜ್ಯದಲ್ಲಿ ಈಗ ರೈತರು ಮತ್ತೆ ಆತಂಕದಲ್ಲಿದ್ದಾರೆ. ಕಬ್ಬು ಬೆಳೆಗಾರರ ಜತೆಗೆ, ಉದ್ದು, ನವಣೆ, ಮೆಕ್ಕೆಜೋಳ, ಅಡಕೆ, ದಾಳಿಂಬೆ, ಭತ್ತ ಬೆಳೆದವರು ಸಂಕಷ್ಟದಲ್ಲಿದ್ದಾರೆ. ರಾಜ್ಯದಲ್ಲಿ ರೈತರ  ಆತ್ಮಹತ್ಯೆ ಘಟನೆಗಳು ಸಂಪೂರ್ಣವಾಗಿ ನಿಂತಿಲ್ಲ. 2010-11ರಲ್ಲಿ 243 ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು, 117ರಲ್ಲಿ ಸರ್ಕಾರ ಪರಿಹಾರ ನೀಡಿದೆ. 2011-12ರಲ್ಲಿ ದಾಖಲಾದ 187  ಪ್ರಕರಣ ಪೈಕಿ 112ಕ್ಕೆ, 2013-14ರಲ್ಲಿ ದಾಖಲಾದ 130 ಪ್ರಕರಣ ಪೈಕಿ 77ಕ್ಕೆ ಹಾಗೂ 2014-15ರಲ್ಲಿ ದಾಖಲಾದ 61 ರೈತರ ಆತ್ಮಹತ್ಯೆ ಪ್ರಕರಣಗಳ ಪೈಕಿ 48ಕ್ಕೆ ಸರ್ಕಾರ ಪರಿಹಾರ ನೀಡಿದೆ.  ಅಂದರೆ, ದಾಖಲಾದ ಪ್ರಕರಣಗಳ ಪೈಕಿ ಸರಾಸರಿ 50ಕ್ಕಿಂತ ಹೆಚ್ಚಿನದರಲ್ಲಿ ಸತ್ಯಾಂಶ ಅಡಗಿರುವುದನ್ನು ಸರ್ಕಾರವೇ ಪರಿಹಾರ ನೀಡುವ ಮೂಲಕ ದೃಢೀಕರಿಸಿದ್ದು, ಅನ್ನದಾತ   ಸಂಕಷ್ಟದಲ್ಲಿದ್ದಾನೆ ಎಂಬುದನ್ನು ಒಪ್ಪಿಕೊಂಡಿದೆ.

ಹೀಗಾಗಿ ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಆತ್ಮಹತ್ಯೆ ತಡೆಯುವುದಕ್ಕಾಗಿ ವೈಜ್ಞಾನಿಕ ಅಧ್ಯಯನ ನಡೆಸಬಲ್ಲರೆ? ಜತೆಗೆ ಆ ವರದಿಯನ್ನು ಬಹಿರಂಗಪಡಿಸಬಲ್ಲರೆ? ಆತ್ಮಹತ್ಯೆ  ಕಲಿಸುವ ಪಾಠ ಕಲಿತು ಶಾಶ್ವತ ಪರಿಹಾರಕ್ಕೆ ಮುಂದಾಗುವರೆ ಎಂಬ ಪ್ರಶ್ನೆ ಈಗ ರಾಜ್ಯದ ರೈತರದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com