

ನವದೆಹಲಿ: ಬಿಬಿಎಂಪಿ ಚುನಾವಣೆಯನ್ನು ಹೇಗಾದರೂ ಸರಿ ಮುಂದೂಡಲೇ ಬೇಕೆಂಬ ಹಠಕ್ಕೆ ಬಿದ್ದಿರುವ ಕರ್ನಾಟಕ ಸರ್ಕಾರ ಮತ್ತೆ ಸುಪ್ರೀಂಕೋರ್ಟ್ ಮೊರೆ ಹೋಗಿದೆ.
ಪ್ರಸ್ತುತ 2001ರ ಜನಗಣತಿ ಪ್ರಕಾರ ಮೀಸಲು ನಿಗದಿ ಮಾಡಲಾಗಿದೆ. 2011ರ ಜನಗಣತಿಯಂತೆ ಮೀಸಲು ನಿಗದಿ ಮಾಡಿ ಚುನಾವಣೆ ನಡೆಸಲು ಅವಕಾಶ ನೀಡಬೇಕು ಎಂದು ರಾಜ್ಯ ಸರ್ಕಾರ ಸೋಮವಾರ ಸಲ್ಲಿಸಿದ ಮೇಲ್ಮನವಿಯಲ್ಲಿ ಕೋರಿದೆ. ಜತೆಗೆ ಚುನಾವಣೆ ಮುಂದೂಡಲು ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಜಾ ಮಾಡಿ ರಾಜ್ಯ ಸರ್ಕಾರಕ್ಕೆ <10 ಸಾವಿರ ದಂಡ ವಿಧಿಸಿದ್ದ ಹೈಕೋರ್ಟ್ ನ ಏಕ ಸದಸ್ಯ ಪೀಠದ ಆದೇಶವನ್ನು ಮೇಲ್ಮನವಿಯಲ್ಲಿ ಪ್ರಶ್ನಿಸಿದೆ.
ಮೇ 5 ರಂದು ಸ್ವತಃ ಸುಪ್ರೀಂಕೋರ್ಟ್ ಮೂರು ತಿಂಗಳ ಒಳಗಾಗಿ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿತ್ತು. ಆ ಆದೇಶದಂತೆ ರಾಜ್ಯ ಸರ್ಕಾರ ಈಗ 2001ರ ಜನಗಣತಿ ಆಧಾರದ ಮೇಲೆ ಚುನಾವಣೆ ನಡೆಸುತ್ತಿದೆ. 2011ನೇ ಸಾಲಿನ ಜನಗಣತಿ ಆಧಾರದ ಮೇಲೆ ಮೀಸಲಾತಿ ನಿಗದಿ ಮಾಡದೇ ಇದ್ದರೆ ಎಸ್‍ಸಿ, ಎಸ್‍ಟಿ ಜನಾಂಗಕ್ಕೆ ಪ್ರಾತಿನಿಧ್ಯ ಕಡಮೆಯಾಗಲಿದ್ದು, ಆ ಸಮುದಾಯಕ್ಕೆ ಸಿಗಬೇಕಾದ ಸಾಮಾಜಿಕ ನ್ಯಾಯ ದಕ್ಕುವುದಿಲ್ಲ.
ಆದ್ದರಿಂದ, 2001ರ ಸಾಲಿನ ಜನಗಣತಿ ಆಧಾರದ ಮೇಲೆ ಮೀಸಲಾತಿ ನಿಗದಿ ಮಾಡಿರುವುದರಿಂದ ಅದನ್ನು ಕೈಬಿಟ್ಟು, 2011ರ ಜನಗಣತಿ ಆಧಾರದ ಮೇಲೆ ಚುನಾವಣೆ ನಡೆಸಲು ಕಾಲಾವಕಾಶ ನೀಡಬೇಕು ಎಂದು ಮೇಲ್ಮನವಿಯಲ್ಲಿ ವಿವರಿಸಲಾಗಿದೆ. ಇನ್ನೆರಡು ದಿನ ಸುಪ್ರೀಂಕೋರ್ಟ್ ಗೆ ರಜೆ. ಜುಲೈ 2 ರಿಂದ ಸುಪ್ರೀಂಕೋರ್ಟ್ ಕಲಾಪಗಳು ಆರಂಭವಾಗಲಿದ್ದು, ಅರ್ಜಿ ವಿಚಾರಣೆಗೆ ಬರಲಿದೆ.