

ನವದೆಹಲಿ: ಇದು ಅತಿ ಸೂಕ್ಷ್ಮ ವಿಚಾರ, ಆದುದರಿಂದ ದೆಹಲಿ ಗ್ಯಾಂಗ್ ರೇಪ್ ಮೇಲೆ ಬಿಬಿಸಿ ನಿರ್ಮಿಸಿರುವ ಸಾಕ್ಷ್ಯಚಿತ್ರವನ್ನು ಕೂಡಲೆ ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಯುಟ್ಯೂಬ್ ಗೆ ಸೂಚನೆ ನೀಡಿದೆ.
ಭಾರತ ಸರ್ಕಾರದ ನಿಷೇಧದ ಹೊರತಾಗಿಯೂ ಬಿಬಿಸಿ ಬುಧವಾರ ರಾತ್ರಿ ಇಂಗ್ಲೆಂಡಿನಲ್ಲಿ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿದ್ದಲ್ಲದೆ, ಯುಟ್ಯೂಬ್ ನಲ್ಲಿ ಅದನ್ನು ಅಪ್ಲೋಡ್ ಮಾಡಿತ್ತು.
ಮೂಲಗಳ ಪ್ರಕಾರ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಇದು ಬಹಳ ಸೂಕ್ಷ್ಮ ವಿಚಾರ. ಇದನ್ನು ಗಣನೆಗೆ ತೆಗೆದುಕೊಂಡು ಯೂಟ್ಯೂಬ್ ತನ್ನ ಅಂತರ್ಜಾಲ ತಾಣದಿಂದ ಈ ಸಾಕ್ಷ್ಯಚಿತ್ರ ತೆಗೆದುಹಾಕಬೇಕೆಂದು ಸೂಚಿಸಿದೆ.
ಯುಟ್ಯೂಬ್ ವಕ್ತಾರರನ್ನು ಸಂಪರ್ಕಿಸಿದಾಗ " ಮಾಹಿತಿ ಲಭ್ಯವಿರುವುದು ಸ್ವತಂತ್ರ ಸಮಾಜದ ಹಕ್ಕು, ಜನರಿಗೆ ತಮ್ಮ ವಿಭಿನ್ನ ನಿಲುವುಗಳನ್ನು ತೋಡಿಕೊಳ್ಳಲು ಯುಟ್ಯೂಬ್ ವೇದಿಕೆ ಒದಗಿಸುತ್ತದೆ. ಸಮುದಾಯದ ಮಾರ್ಗಸೂತ್ರಗಳನ್ನು ಮೀರುವ ವಿಡಿಯೋಗಳನ್ನಷ್ಟೆ ನಾವು ತೆಗೆದುಹಾಕಲು ಸಾಧ್ಯ" ಎಂದಿದ್ದಾರೆ.
ಭಾರತ ಸರ್ಕಾರದ ನಿಷೇಧದ ಹೊರತಾಗಿಯೂ ಬಿಬಿಸಿ ಈ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿರುವುದಕ್ಕೆ ಅವರ ವಿರುದ್ಧ ಕಾನೂನು ಕ್ರಮ ಸಾಧ್ಯವೇ ಎಂಬುದನ್ನು ಸರ್ಕಾರ ಚಿಂತಿಸುತ್ತಿದೆ.
ಈ ವಿವಾದಕ್ಕೆ ಉತ್ತರಿಸಿರುವ ಬಿಬಿಸಿ, ನಿಷೇಧ ಇದ್ದದ್ದು ಭಾರತದಲ್ಲಿ. ನಾವು ಭಾರತದಲ್ಲಿ ಇದನ್ನು ಪ್ರಸಾರ ಮಾಡಿಲ್ಲ ಎಂದು ಜಾರಿಕೊಂಡಿದೆ.