

ಗುರಗಾಂವ್: ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರು ಹಂದಿ ಜ್ವರದಿಂದ (ಎಚ್೧ ಎನ್೧ ವೈರಸ್) ಬಳಲುತ್ತಿದ್ದು ಗುರಗಾಂವ್ ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯರೊಬ್ಬರು ಶನಿವಾರ ತಿಳಿಸಿದ್ದಾರೆ.
ಸೆಕ್ಟಾರ್ ೩೮ರ ಮೆದಾಂತ ಮೆಡಿಸಿಟಿ ಆಸ್ಪತ್ರೆಗೆ ಮುಲಾಯಂ ಸಿಂಗ್ ಅವರನ್ನು ದಾಖಲು ಮಾಡಲಾಗಿದೆ.
"ಮುಲಾಯಂ ಸಿಂಗ್ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಈಗ ಅವರ ಆರೋಗ್ಯ ಸ್ಥಿರವಾಗಿದೆ ಆಸ್ಪತ್ರೆಯಿಂದ ಯಾವಾಗ ಹೊರಗೆ ಬರುತ್ತಾರೆ ಎಂದು ಈಗಲೆ ಹೇಳಲಾಗುವುದಿಲ್ಲ" ಎಂದಿದ್ದಾರೆ ಮೆದಾಂತ ಮೆಡಿಸಿಟಿಯ ಆರೋಗ್ಯ ಅಧಿಕಾರಿ ಎ ಕೆ ದುಬೆ.
ಸುಶಿಲಾ ಕಟಾರಿಯಾ ನಾಯಕತ್ವದ ವೈದ್ಯರ ತಂಡ ಮುಲಾಯಂ ಅವರ ಸುಶ್ರುಷೆ ಮಾಡುತ್ತಿದೆ. ಶನಿವಾರ ಬೆಳಗ್ಗೆ ೧:೩೦ (ಮಧ್ಯರಾತ್ರಿ) ಮುಲಾಯಂ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಕೆಲವು ದಿನಗಳಿಂದ ಆರೋಗ್ಯ ತಪ್ಪಿರುವ ಯಾದವ್ ಅವರನ್ನು ಬುಧವಾರ ಮಧ್ಯಾಹ್ನ ಲಕನೌನ ಆಸ್ಪತ್ರೆಗೆ ಸೇರಿಸಲಾಗಿತ್ತು.