

ಮುಂಬೈ: ೨೦೦೨ ರ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ತಪ್ಪಿತಸ್ಥ ಎಂದು ಪರಿಗಣಿಸಿ ಮುಂಬೈನ ಸೆಷನ್ ಕೋರ್ಟ್ ಐದು ವರ್ಷದ ಜೈಲು ಸಜೆಯನ್ನು ವಿಧಿಸಿದ್ದು, ನಟ ಸಲ್ಮಾನ್ ಖಾನ್ ಅವರ ಜಾಮೀನು ವಿಚಾರಣೆ ಬಾಂಬೆ ಹೈಕೋರ್ಟ್ ನಲ್ಲಿ ಇನ್ನು ಸ್ವಲ್ಪ ಸಮಯದಲ್ಲೇ ವಿಚಾರಣೆಗೆ ಬರುವುದಾಗಿ ತಿಳಿಯಲಾಗಿದೆ.
ಹಿರಿಯ ವಕೀಲ ಹರೀಶ್ ಸಾಳ್ವೆ ಸಲ್ಮಾನ್ ಖಾನ್ ಅವರ ಜಾಮೀನಿಗೆ ವಾದ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಇದಕ್ಕೂ ಮೊದಲು ತೀರ್ಪು ನೀಡಿದ್ದ ನ್ಯಾಯಾಧೀಶ ಡಿ ಡಬ್ಲ್ಯು ದೇಶಪಾಂಡೆ ಆರೋಪಿಯ ವಿರುದ್ಧ ಎಲ್ಲ ಆರೋಪಗಳು ಸಾಬೀತಾಗಿವೆ ಎಂದಿದ್ದರು. "ನೀವು ಲೈಸೆನ್ಸ್ ಇಲ್ಲದೆ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿದ್ದಿರಿ" ಎಂದು ಕೋರ್ಟ್ ನಲ್ಲಿ ಹಾಜರಿದ್ದ ಸಲ್ಮಾನ್ ಖಾನ್ ಅವರಿಗೆ ನ್ಯಾಯಾಧೀಶರು ಹೇಳಿದ್ದರು.