

ಸಿಂಗಾಪುರ: ಸಿಲಿಕಾನ್ ಸಿಟಿ ಬೆಂಗಳೂರು, ಮುಂಬಯಿ ಹಾಗೂ ಕೋಲ್ಕತಾ ವಿಶ್ವದಲ್ಲಿ ಅತಿ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಎ.ಟಿ ಕೇರ್ನ್ಸ್ ಜಾಗತಿಕ ನಗರಗಳ ಸೂಚ್ಯಂಕ ಪಟ್ಟಿಯಲ್ಲಿ ಭಾರತದ ಈ ಮೂರು ಮೆಟ್ರೊಪಾಲಿಟನ್ ನಗರಗಳು ಸ್ಥಾನ ಪಡೆದಿದ್ದು, ನ್ಯೂಯಾರ್ಕ್ ಮೊದಲ ಸ್ಥಾನ ಹಾಗೂ ಲಂಡನ್ ಎರಡನೇ ಸ್ಥಾನ ಪಡೆದುಕೊಂಡಿದೆ.
ನಗರಗಳ ವಾಣಿಜ್ಯ ಚಟುವಟಿಕೆ, ಮಾಹಿತಿಗಳ ವಿನಿಮಯ, ಮಾನವ ಸಂಪನ್ಮೂಲ, ಸಾಂಸ್ಕೃತಿಕ ಪರಿಸರ ಮತ್ತು ರಾಜಕೀಯದಲ್ಲಿ ಜನತೆ ಪಾಲ್ಗೊಳ್ಳುವಿಕೆ ಎಂಬ ಅಂಶಗಳನ್ನು ಮುಖ್ಯವಾಗಿ ಮಾನದಂಡವಾಗಿಟ್ಟುಕೊಂಡು ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಭಾರತದ ಈ ಮೂರು ನಗರಗಳು ಮುಖ್ಯವಾಗಿ ಮಾಹಿತಿ ವಿನಿಮಯದಲ್ಲಿ ಸುಧಾರಿಸಿವೆ. ಬ್ರಾಡ್‌ಬಾಂಡ್ ಬಳಕೆದಾರರ ಸಂಖ್ಯೆ ಹೆಚ್ಚಾಗಿರುವುದು ಇದಕ್ಕೆ ಕಾರಣವೆಂದು ಲಂಡನ್ ಮೂಲದ ಅಂತಾರಾಷ್ಟ್ರೀಯ ಮ್ಯಾನೇಜ್‌ಮೆಂಟ್ ಕನ್ಸಲ್ಟಿಂಗ್ ಕಂಪನಿ ತಿಳಿಸಿದೆ.
ಯಾವುದೇ ನಗರದ ಯಶಸ್ಸಿಗೆ ಮಾನವ ಸಂಪನ್ಮೂಲವನ್ನು ಸೆಳೆಯುವ ಸಾಮರ್ಥ್ಯ ಅಗತ್ಯ. ಇದಕ್ಕಾಗಿ ನಗರಗಳಲ್ಲಿ ವಾಸ್ತವ್ಯಕ್ಕೆ ಪೂರಕ ಪರಿಸರ, ಅವಕಾಶಗಳು ಇರಬೇಕಾಗುತ್ತದೆ. ಭಾರತದ ಪ್ರಮುಖ ನಗರಗಳಲ್ಲಿ ನಗರಾಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಸರಕಾರ 100 ಸ್ಮಾರ್ಟ್ ಸಿಟಿಗಳ ಅಭಿವೃದ್ಧಿಗೆ ಮುಂದಾಗಿದೆ ಎಂದು ಎಟಿ ಕೇರ್ನ್ಸ್ ಜತೆ ಪಾಲುದಾರಿಕೆ ಹೊಂದಿರುವ ದೇಬಶೀಷ್ ಮುಖರ್ಜಿ ಹೇಳಿದ್ದಾರೆ. 2008ರಿಂದ ಈ ಪಟ್ಟಿ ಬಿಡುಗಡೆಯಾಗುತ್ತಿದ್ದು, ಗ್ಲೋಬಲ್ ಸಿಟೀಸ್ 2015 ಮತ್ತು ಗ್ಲೋಬಲ್ ಸಿಟೀಸ್ ಇಂಡೆಕ್ಸ್ ಎಂಬ ಎರಡು ವಿಭಾಗವನ್ನು ಒಳಗೊಂಡಿದೆ.
ಲಾಸ್ ಏಂಜಲೀಸ್, ಶಿಕಾಗೊ, ಟೊರೊಂಟೊ, ಸನ್ ಫ್ರಾನ್ಸಿಸ್ಕೊ, ಬೋಸ್ಟನ್, ಪ್ಯಾರಿಸ್, ಬ್ರುಸ್ಸೆಲ್ಸ್, ಬರ್ಲಿನ್, ಟೋಕಿಯೊ, ಸಿಂಗಾಪುರ, ಸಿಡ್ನಿ, ಮೆಲ್ಬೋರ್ನ್ ಜಾಗತಿಕ ನಗರಗಳ ಸೂಚ್ಯಂಕದಲ್ಲಿ ಸ್ಥಾನ ಪಡೆದಿವೆ.