

ಚೆನ್ನೈ: ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನಿಂದ ಆರೋಪ ಮುಕ್ತರಾಗಿರುವ ಎಐಎಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾ ಅವರು 8 ತಿಂಗಳ ನಂತರ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಶುಕ್ರವಾರ ತಮಿಳುನಾಡು ರಾಜ್ಯಪಾಲ ಕೆ.ರೋಸಯ್ಯ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದಾರೆ.
ಇಂದು ಮಧ್ಯಾಹ್ನ ತಮ್ಮ ಪೋಯಸ್ ಗಾರ್ಡನ್ ನಿವಾಸದಿಂದ ರಾಜಭವನಕ್ಕೆ ತೆರಳಿದ ಜಯಲಲಿತಾ, ರೋಸಯ್ಯ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಮುಂದಿನ ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದರು.
ಮೂಲಗಳ ಪ್ರಕಾರ, ನಾಳೆ ಬೆಳಗ್ಗೆ 11 ಗಂಟೆಗೆ ಜಯಲಲಿತಾ ಅವರು ಮತ್ತೆ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇದಕ್ಕು ಮುನ್ನ ಬೆಳಗ್ಗೆ 7 ಗಂಟೆಯ ಸುಮಾರಿಗೆ ಎಐಎಡಿಎಂ ಪ್ರಧಾನ ಕಚೇರಿಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಜಯಲಲಿತಾ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಸ್ಪೀಕರ್ ಪಿ.ಧನಪಾಲ್ ಹೊರತುಪಡಿಸಿ ಎಐಎಡಿಎಂಕೆಯ 144 ಶಾಸಕರು ಭಾಗವಹಿಸಿದ್ದರು.
ಶಾಸಕಾಂಗ ಪಕ್ಷದ ಸಭೆಯ ಬಳಿಕ ಸಿಎಂ ಓ ಪನ್ನೀರ್ ಸೇಲ್ವಂ ನೇತೃತ್ವದಲ್ಲಿ ಸಂಪುಟದ ಎಲ್ಲಾ ಸಚಿವರು ರಾಜ್ಯಪಾಲ ಕೆ.ರೋಸಯ್ಯ ಅವರನ್ನು ಭೇಟಿ ಮಾಡಿ ರಾಜಿನಾಮೆ ಸಲ್ಲಿಸಿದರು. ರಾಜಿನಾಮೆ ಅಂಗೀಕರಿಸಿದ ರಾಜ್ಯಪಾಲರು, ನೂತನ ಸರ್ಕಾರ ರಚಿಸುವಂತೆ ಜಯಲಲಿತಾ ಅವರಿಗೆ ಆಹ್ವಾನ ನೀಡಿದ್ದರು.
ಕಳೆದ ಸೆಪ್ಟೆಂಬರ್ 27ರಂದು ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜಯಲಲಿತಾ ಅವರು ದೋಷಿ ಎಂದು ಬೆಂಗಳೂರು ಸೆಷೆನ್ಸ್ ಕೋರ್ಟ್ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಆದರೆ ಮೇ 11ರಂದು ಕರ್ನಾಟಕ ಹೈಕೋರ್ಟ್ ಸೆಷೆನ್ಸ್ ಕೋರ್ಟ್ ತೀರ್ಪು ರದ್ದುಗೊಳಿಸಿ, ಜಯಲಲಿತಾ ನಿರ್ದೋಷಿ ಎಂದು ತೀರ್ಪು ನೀಡಿದೆ. ಹೀಗಾಗಿ ಜಯಾ ಮತ್ತೆ ಸಿಎಂ ಆಗುತ್ತಿದ್ದಾರೆ.