

ಕಾಬುಲ್: ಅಫ್ಘಾನಿಸ್ಥಾನ ಉರುಜ್ಗನ್ ಪ್ರಾಂತ್ಯದಲ್ಲಿ ಶನಿವಾರ ಸಂಭವಿಸಿರುವ ಬಾಂಬ್ ಸ್ಫೋಟದಲ್ಲಿ ಜಿಲ್ಲ ಗವರ್ನರ್ ಒಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಚರ್ಚಿನೋ ಜಿಲ್ಲೆಯ ಪ್ರಾಂತಾಧಿಪತಿ ಮೊಹಮ್ಮದ್ ಇಸ್ಮಾಯಿಲ್ ಹಕ್ಯಾರ್ ಅವರು ಶನಿವಾರ ಬೆಳಗ್ಗೆ ಕಚೇರಿಗೆ ತೆರಳುವಾಗ ಷಾ ಮಶಾದ್ ಪ್ರದೇಶದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಮೃತಪಟ್ಟು ಮತ್ತೊಬ್ಬರು ಗಾಯಗೊಂಡಿದ್ದಾರೆ" ಎಂದು ಅವರು ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಚರ್ಚಿನೋ ಜಿಲ್ಲೆಯ ಪ್ರಾಂತಾಧಿಪತಿಯಾಗಿ ಕಾರ್ಯನಿರ್ವಹಿಸುತ್ತಿರುವ ಹಕ್ಯಾರ್ ಅವರನ್ನು ಪ್ರಮುಖ ತಾಲಿಬಾನ್ ವಿರೋಧಿ ಎಂದು ಪರಿಗಣಿಸಲಾಗಿತ್ತು ಹಾಗೂ ಭದ್ರತಾ ಪಡೆಗಳ ಜೊತೆ ತಾಲಿಬಾನ್ ವಿರುದ್ಧ ಯುದ್ಧ ಮಾಡಿದ್ದರು ಎನ್ನಲಾಗಿದೆ.
ಈ ಘಟನೆಯ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.