ಪದಚ್ಯುತಿ ನಿರ್ಣಯ ಇಂದು ಮಂಡನೆ

ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಪದಚ್ಯುತಿ ನಿರ್ಣಯ ಶುಕ್ರವಾರ ವಿಧಾನಸಭೆಯಲ್ಲಿ ಮಂಡನೆಯಾಗಲಿದ್ದು, ಈ ವಿಚಾರದಲ್ಲಿ ನಿರ್ಣಾಯಕ ಕ್ರಮ ತೆಗೆದು ಕೊಳ್ಳಬೇಕಿರುವ..
ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್ ರಾವ್ (ಸಂಗ್ರಹ ಚಿತ್ರ)
ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್ ರಾವ್ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಪದಚ್ಯುತಿ ನಿರ್ಣಯ ಶುಕ್ರವಾರ ವಿಧಾನಸಭೆಯಲ್ಲಿ ಮಂಡನೆಯಾಗಲಿದ್ದು, ಈ ವಿಚಾರದಲ್ಲಿ ನಿರ್ಣಾಯಕ ಕ್ರಮ ತೆಗೆದು ಕೊಳ್ಳಬೇಕಿರುವ ಸ್ಪೀಕರ್ ಕಾಗೋಡು ತಿಮ್ಮಪ್ಪ ಸದನ ಪ್ರಮುಖರು, ಎಸ್‍ಐಟಿ ಮುಖ್ಯಸ್ಥರು ಹಾಗೂ ಅಡ್ವೋಕೇಟ್ ಜನರಲ್ ಅವರ ಜತೆ ಮಹತ್ವದ ಸಭೆ ನಡೆಸಿದ್ದಾರೆ.

ಗುರುವಾರ ಮಧ್ಯಾಹ್ನದ ನಂತರ ಲೋಕಾಯುಕ್ತ ಪದಚ್ಯುತಿ ಪ್ರಕ್ರಿಯೆಗೆ ಭಾರಿ ಚುರುಕು ಸಿಕ್ಕಿದ್ದು, ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಪ್ರಕರಣದ ಸಾದ್ಯಂತ ಮಾಹಿತಿಯನ್ನು ತನಿಖಾ ಸಂಸ್ಥೆಯ ಮುಖ್ಯಸ್ಥ ಕಮಲ್ ಪಂಥ್ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಜತೆಗೆ ಮುಂದಿನ ಕಾನೂನು ಪರಿಕ್ರಮಗಳು ಹೇಗಿರಬೇಕು ಎಂಬ ಬಗ್ಗೆ ಅಡ್ವೊಕೇಟ್ ಜನರಲ್ ಮಧು ಸೂದನ್  ಆರ್.ನಾಯಕ್ ಅವರ ಜತೆ ಚರ್ಚೆ ನಡೆಸಿದ್ದಾರೆ. ತನಿಖಾ ತಂಡದ ಜತೆಗೆ ಸ್ಪೀಕರ್ ಕಚೇರಿಗೆ ಆಗಮಿಸಿದ ಕಮಲ್ ಪಂಥ್ ಸುಮಾರು ಮೂರು ಗಂಟೆ ಕಾಲ ಕಾಗೋಡು ತಿಮ್ಮಪ್ಪ ಅವರಿಗೆ  ಪ್ರಕರಣದ ಬಗ್ಗೆ ವಿವರಣೆ ನೀಡಿದರು. ಆ ಸಂದರ್ಭದಲ್ಲಿ ಅಡ್ವೋಕೇಟ್ ಜನರಲ್ ಅವರು ಜತೆಗಿದ್ದರು.

ಕಲಾಪ ಅಂತ್ಯವಾದ ಬಳಿಕ ಸದನ ಪ್ರಮುಖರಾದ ಜಗದೀಶ್ ಶೆಟ್ಟರ್, ಎಚ್. ಡಿ.ರೇವಣ್ಣ ಸೇರಿದಂತೆ ಹಿರಿಯ ಮುಖಂ ಡರ ಜತೆಯೂ ಅವರು ಮಾತುಕತೆ ನಡೆಸಿದ್ದು, ನಾಳೆ ವಿಧಾನಸಭೆ ಯಲ್ಲಿ  ಲೋಕಾಯುಕ್ತರ ಪದಚ್ಯುತಿ ನಿರ್ಣಯ ಮಂಡನೆಯಾಗಲಿದೆ. ಆ ಬಳಿಕ ಸುದ್ದಿ ಗಾರರ ಜತೆ ಮಾತನಾಡಿದ ಸ್ಪೀಕರ್ ಕಾಗೋಡು ತಿಮ್ಮಪ್ಪ, ಈ ವಿಚಾರ ಸಂಬಂಧ ಸದನ ಪ್ರಮುಖರ ಜತೆಗೆ ಚರ್ಚೆ  ನಡೆಸಿದ್ದೇನೆ. ವಿಧಾನಸಭೆಯಲ್ಲಿ ನಿರ್ಣಯ ಮಂಡನೆಯಾಗಿ ಅಂಗೀಕಾರಗೊಂಡ ನಂತರ ಅದನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿದ್ದಾರೆ.

ನಿರ್ಣಯ ಅಂಗೀಕಾರವಾಗುವುದೇ?: ಈ ಮಧ್ಯೆ ಲೋಕಾಯುಕ್ತ ಪದಚ್ಯುತಿ ನಿರ್ಣಯ ವಿಧಾನಸಭೆಯಲ್ಲಿ ಅಂಗೀಕಾರವಾಗುವ ವಿಚಾರದಲ್ಲೇ ಕೆಲವು ಪ್ರಾಥಮಿಕ ಅನುಮಾನಗಳು  ವ್ಯಕ್ತವಾಗತೊಡಗಿವೆ. ನಿರ್ಣಯ ಸಲ್ಲಿಕೆಯಾದ ರೀತಿಯ ಬಗ್ಗೆ ಮೂರು ಬಗೆಯ ವ್ಯಾಖ್ಯಾನಗಳು ನಡೆಯುತ್ತಿದ್ದು, ಅಂತಿಮವಾಗಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಅಂಗಳದಲ್ಲಿ ಚೆಂಡು  ನಿಲ್ಲಲಿದೆ. ಲೋಕಾಯುಕ್ತ ಪದಚ್ಯುತಿ ನಿರ್ಣಯಕ್ಕೆ ನಿಯಮ ಪ್ರಕಾರ ಸದನದ ಒಟ್ಟೂ ಸಂಖ್ಯಾಬಲದ ಮೂರನೇ ಒಂದರಷ್ಟು ಸದಸ್ಯರ ಸಹಿ ಇರಬೇಕು. ಅಂದರೆ 76 ಸದಸ್ಯರ ಬಲ ಬೇಕು.  ಜೆಡಿಎಸ್‍ನ 36 ಹಾಗೂ ಬಿಜೆಪಿಯ 36 ಸದಸ್ಯರು ಸಹಿ ಇರುವ ಪ್ರತ್ಯೇಕ ನಿರ್ಣಯಗಳು ಈಗ ಸಲ್ಲಿಕೆಯಾಗಿದೆ.

ಎರಡನ್ನೂ ಒಂದೇ ಆಗಿ ಪರಿಗಣಿಸಬೇಕೆ, ಪ್ರತ್ಯೇಕವಾಗಿ ಲೆಕ್ಕ ಹಾಕಬೇಕೇ? ಎಂಬ ಸಂದಿಗ್ಧತೆ ಈಗ ಸೃಷ್ಟಿಯಾಗಿದೆ. ಇವೆರಡನ್ನೂ ಒಂದೇ ಆಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬುದು ಕಾನೂನು  ತಜ್ಞರ ಅಭಿಪ್ರಾಯ. ಸ್ಪೀಕರ್ ಈ ಎರಡನ್ನೂ ಕ್ಲಬ್ ಮಾಡಿ ನಿರ್ಣಯ ಅಂಗೀಕರಿಸಬಹುದೆಂದು ಇನ್ನೊಂದು ವಾದ. ಜತೆಗೆ, ವಿಧಾನಸಭೆಯಲ್ಲಿ ಪ್ರತ್ಯೇಕ ನಿರ್ಣಯ ಮಂಡಿಸಬೇಕಾದ ಅಗತ್ಯವಿಲ್ಲ,  ವಿಧಾನ ಪರಿಷತ್ ಸಭಾಪತಿಗಳು ನಿರ್ಣಯವನ್ನು ಹೈಕೋ ರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಿ ಕೊಟ್ಟರೂ ಪ್ರಕ್ರಿಯೆ ಆರಂಭವಾಗುತ್ತದೆ ಎಂಬ ವಾದವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com