ಬೆಂಗಳೂರು: ಅಕ್ರಮ ಅದಿರು ಗಣಿಗಾರಿಕೆ, ಸಾಗಣೆ ಹಾಗೂ ರಫ್ತು ಪ್ರಕರಣ ಸಂಬಂಧ ಎಸ್‍ಐಟಿ ಅಧಿಕಾರಿಗಳಿಂದ ಬಂಧಿತರಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಆಪ್ತ ಮೆಹಫೂಜ್ ಅಲಿ ಖಾನ್‍ರನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ನ.27ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಶನಿವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಅಲಿಖಾನ್‍ರನ್ನು ಪೊಲೀಸರು ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯ ನ. 27ರವರೆಗೆ ನ್ಯಾಯಾಂಗ ವಶಕ್ಕೆ ನೀಡಿತು. ಬಳ್ಳಾರಿ ವನಹಳ್ಳಿಯಲ್ಲಿ ಬ್ಲ್ಯಾಕ್ ಗೋಲ್ಡ್ ಮೈನ್ಸ್ ಹಾಗೂ ಮಿನರಲ್ಸ್ ಸಂಸ್ಥೆ ಗಣಿಗಾರಿಕೆ ಲೀಸ್ ಅವಧಿ ಮುಕ್ತಾಯಗೊಂಡಿದ್ದರೂ ಅಕ್ರಮವಾಗಿ ಗಣಿಗಾರಿಕೆ ಮಾಡಿ ರಫ್ತು ಮಾಡಲಾಗಿತ್ತು. ಈ ಸಂಬಂಧ ಅಂದಿನ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ಗಣಿಗಾರಿಕೆ ವರದಿ ಪಾರ್ಟ್-2 ಸಲ್ಲಿಸಿದ್ದರು. ಈ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಎಸ್‍ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅಕ್ರಮವಾಗಿ ಸುಮಾರು 2 ಲಕ್ಷ ಟನ್ ಅದಿರನ್ನು ರಫ್ತು ಮಾಡಿರುವ ಆರೋಪದ ಮೇಲೆ ಶುಕ್ರವಾರ ಅಲಿಖಾನ್‍ನನ್ನು ಬಂಧಿಸಿದ್ದು, ಶನಿವಾರ ನ್ಯಾಯಾ ಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಎಸ್‍ಐಟಿ ಮುಖ್ಯಸ್ಥ ಚರಣ್ ರೆಡ್ಡಿ ತಿಳಿಸಿದ್ದಾರೆ. ಅಕ್ರಮ ಅದಿರು ರಫ್ತು ಪ್ರಕರಣ ಸಂಬಂಧ ಅಲಿಖಾನ್‍ಗೆ ವಿಚಾರಣೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಅದರಂತೆ ವಿಚಾರಣೆಗೆ ಆಗಮಿಸಿದ್ದ ವೇಳೆ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಸೂಕ್ತ ಉತ್ತರ ಮತ್ತು ದಾಖಲೆಗಳನ್ನು ಒದಗಿಸದ ಕಾರಣ ಬಂಧಿಸಲಾಯಿತು. ಹೆಚ್ಚಿನ ವಿಚಾರಣೆಗೊಳಪಡಿಸುವ ಅಗತ್ಯಬಿದ್ದರೆ ತಮ್ಮ ವಶಕ್ಕೆ ಪಡೆದು ಮಾಹಿತಿ ಪಡೆದುಕೊಳ್ಳಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ.