ಅಕ್ರಮ ಡಿನೋಟಿಫಿಕೇಷನ್: ಬಿಎಸ್ ವೈ ವಿರುದ್ಧದ ಪ್ರಾಸಿಕ್ಯೂಷನ್ ಅನುಮತಿ ರದ್ದು

ಅಕ್ರಮ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಭೀತಿ ಎದುರಿಸುತ್ತಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಬಿಗ್ ರಿಲೀಫ್ ದೊರೆತಿದ್ದು, ರಾಜ್ಯಪಾಲರು ನೀಡಿದ್ದ ಅನುಮತಿಗೆ ಹೈಕೋರ್ಟ್ ತಡೆ ನೀಡಿದೆ...
ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಿಎಸ್ ಯಡಿಯೂರಪ್ಪ (ಸಂಗ್ರಹ ಚಿತ್ರ)
ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಿಎಸ್ ಯಡಿಯೂರಪ್ಪ (ಸಂಗ್ರಹ ಚಿತ್ರ)

ಬೆಂಗಳೂರು: ಅಕ್ರಮ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಭೀತಿ ಎದುರಿಸುತ್ತಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಬಿಗ್ ರಿಲೀಫ್  ದೊರೆತಿದ್ದು, ರಾಜ್ಯಪಾಲರು ನೀಡಿದ್ದ ಅನುಮತಿಗೆ ಹೈಕೋರ್ಟ್ ತಡೆ ನೀಡಿದೆ.

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ವಕೀಲ ಸಿರಾಜಿನ್ ಬಾಷಾ ದಾಖಲಿಸಿದ್ದ 5 ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ನೀಡಿದ್ದ ಅನುಮತಿಯನ್ನು ಹೈಕೋರ್ಟ್ ಮಂಗಳವಾರ ರದ್ದು ಮಾಡಿದೆ. ಹೈಕೋರ್ಟ್ ನ ವಿಭಾಗೀಯ ಪೀಠದ ಹಂಗಾಮಿ ಸಿಜೆ ಎಸ್ ಕೆ ಮುಖರ್ಜಿ ಅವರು ಪ್ರಾಸಿಕ್ಯೂಷನ್ ಅನುಮತಿಯನ್ನು ರದ್ದು ಪಡಿಸಿ ಆದೇಶ ನೀಡಿದ್ದಾರೆ.

ಯಡಿಯೂರಪ್ಪ ಅವರ ವಿರುದ್ಧ ಪ್ರಾಸಿಕ್ಯೂಷನ್ ನಡೆಸಲು ಅಂದಿನ ರಾಜ್ಯಪಾಲರಾದ ಹಂಸರಾಜ್ ಭಾರದ್ವಾಜ್ ಅವರು, ಪರಿಗಣಿಸಿದ್ದ ಅಂಶಗಳು ಸರಿ ಇಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ಸಂದರ್ಭದಲ್ಲಿ ರಾಜ್ಯಪಾಲರು ತಾವೇಕೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದೇವೆ ಮತ್ತು ಆ ಅಂಶಗಳೇನು ಎಂಬುದರ ಬಗ್ಗೆ  ಸ್ಪಷ್ಟವಾಗಿ ತಿಳಿಸಿಲ್ಲ. ಅಲ್ಲದೆ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬಾರದು ಎಂದು ಅಂದಿನ ಸಚಿವ ಸಂಪುಟ ಸಭೆ ಒಮ್ಮತದ ತೀರ್ಮಾನ ಕೈಗೊಂಡಿದೆ. ಅದರ  ಹೊರತಾಗಿಯೂ ರಾಜ್ಯಪಾಲರು ಈ ತೀರ್ಮಾನ ಕೈಗೊಳ್ಳಲು ಕಾರಣವೇನು ಎಂಬುದರ ಕುರಿತು ಸ್ಪಷ್ಟವಾಗಿ ತಿಳಿಸಿಲ್ಲ.

ಬಹುಶಃ ರಾಜ್ಯಪಾಲರು ತಮ್ಮ ವಿವೇಚನೆ ಬಳಸದೇ ಈ ತೀರ್ಮಾನ ಕೈಗೊಂಡಿರುವ ಸಾಧ್ಯತೆ ಇದೆ. ತಮ್ಮ ವಿವೇಚನೆ ಬಳಸಿದ್ದರೆ ಈ ತೀರ್ಮಾನಕ್ಕೆ ನಿರ್ದಿಷ್ಟ ಕಾರಣವೇನು ಎಂದು  ತಿಳಿಸಿರುತ್ತಿದ್ದರು. ಹೀಗಾಗಿ ಅರ್ಜಿಯನ್ನು ಮತ್ತೆ ರಾಜ್ಯಪಾಲರಿಗೆ ರವಾನಿಸಲಾಗುತ್ತಿದ್ದು, ಹೊಸದಾಗಿ ಅರ್ಜಿಯನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳುವಂತೆ ಕೋರ್ಟ್ ಸೂಚಿಸಿದೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧದ ಡಿನೋಟಿಫಿಕೇಶನ್ ಪ್ರಕರಣದ ಸಂಬಂಧ ವಿಚಾರಣೆ ನಡೆಸಲು ಪ್ರಾಸಿಕ್ಯೂಷನ್ ಅನುಮತಿ ನೀಡಬೇಕೆಂದು ವಕೀಲರಾದ ಸಿರಾಜಿನ್ ಬಾಷಾ  ಹಾಗೂ ಬಾಲರಾಜ್ ಅವರು ಅಂದಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ 2010 ಡಿಸೆಂಬರ್ 28ರಂದು ಮನವಿ ಸಲ್ಲಿಸಿದ್ದರು. ಅದರಂತೆ ಭಾರದ್ವಾಜ್ ಅವರು ಬಿಎಸ್ ವೈ ವಿರುದ್ಧ  ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದರು.

ನಂತರ ಭ್ರಷ್ಟಾಚಾರದ ಆರೋಪದಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ರಾಜ್ಯಪಾಲ ಹಂಸರಾಜ್ ಅವರು ಜನವರಿ 21ರಂದು ಗ್ರೀನ್ ಸಿಗ್ನಲ್  ಕೊಟ್ಟಿದ್ದರು. ರಾಜ್ಯದ ಇತಿಹಾಸದಲ್ಲೇ ಭ್ರಷ್ಟಾಚಾರ ಆರೋಪದಡಿ ಮುಖ್ಯಮಂತ್ರಿಯೊಬ್ಬರ ವಿರುದ್ಧ ರಾಜ್ಯಪಾಲರು ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅನುಮತಿ ನೀಡಿರುವುದು ಮೊದಲ ಪ್ರಕರಣವಾಗಿತ್ತು.

ಇದರಿಂದಾಗಿ ಆಡಳಿತಾರೂಢ ಬಿಜೆಪಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿತ್ತು. ಬಳಿಕ ಸಾಕಷ್ಟು ರಾಜಕೀಯ ಬೆಳವಣಿಗೆ ನಡೆದು, ಬಿಎಸ್ ವೈ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.  ಬಳಿಕ ತಮ್ಮ ವಿರುದ್ಧದ ಪ್ರಾಸಿಕ್ಯೂಷನ್ ಅನುಮತಿಯನ್ನು ರದ್ದುಪಡಿಸಬೇಕೆಂದು ಕೋರಿ ಬಿಎಸ್ ವೈ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com