

ನವದೆಹಲಿ: ಖ್ಯಾತ ಲೇಖಕ ಸಲ್ಮಾನ್ ರಶ್ದಿ ಅವರ 'ಸಟಾನಿಕ್ ವರ್ಸಸ್' ಪುಸ್ತಕದ ನಿಷೇಧದ ಕುರಿತ ಚರ್ಚೆ ಆಗ ಮತ್ತೆ ಗರಿಗೆದರಿದ್ದು, ಕಾಂಗ್ರೆಸ್ ಪಕ್ಷ ಇದಕ್ಕೆ ತಾನು ಕಾರಣವಲ್ಲ ಬದಲಾಗಿ ಪ್ರಕಾಶಕ ಪೆಂಗ್ವಿನ್ ಸಂಸ್ಥೆಯ ಅಂದಿನ ಸಲಹಾ ಸಂಪಾದಕರಾಗಿದ್ದ ಖುಷ್ವಂತ್ ಸಿಂಗ್ ಕಾರಣ ಎಂದು ಹೇಳಿ ನುಣುಚಿಕೊಳ್ಳಲು ಪ್ರಯತ್ನಿಸಿದೆ.
ಇಲ್ಲ, ಪುಸ್ತಕವನ್ನು ಭಾರತದಲ್ಲಿ ಎಂದಿಗೂ ನಿಷೇಧಿಸಲಾಗಿರಲಿಲ್ಲ ಎಂದು ತಿಳಿಸಿರುವ ಕಾಂಗ್ರೆಸ್ ವಕ್ತಾರ ಪಿ ಎಲ್ ಪುನಿಯಾ, ಪುಸ್ತಕದ ಆಮದನ್ನಷ್ಟೇ ನಿಷೇಧಿಸಲಾಗಿತ್ತು. ಪ್ರಕಾಶಕರಾದ ಪೆಂಗ್ವಿನ್ ಪುಸ್ತಕವನ್ನು ಇಲ್ಲಿ ಮುದ್ರಿಸಿ ಮಾರಾಟ ಮಾಡುವುದರಿಂದ ಹಿಂಜರಿಯಿತು ಎಂದಿದ್ದಾರೆ.
ಪೆಂಗ್ವಿನ್ ಸಂಸ್ಥೆಗೆ ಸಲಹಾ ಸಂಪಾದಕರಾಗಿದ್ದ ದಿವಂಗತ ಪತ್ರಕರ್ತ ಸಂಪಾದಕ ಖುಷ್ವಂತ್ ಸಿಂಗ್ ಅವರ ಸಲಹೆಯ ಮೇರೆಗೆ ಪೆಂಗ್ವಿನ್ ಈ ನಿರ್ಣಯ ಕೈಗೊಂಡಿತು. ಇದಕ್ಕೆ ರಾಜೀವ್ ಗಾಂಧಿ ಸರ್ಕಾರ ಕಾರಣವಲ್ಲ ಎಂದು ಪುನಿಯಾ ಹೇಳಿದ್ದಾರೆ.
ಇತ್ತೀಚೆಗಷ್ಟೇ ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ, ರಶ್ದಿ ಪುಸ್ತಕವನ್ನು ನಿಷೇಧಿಸಿದ್ದು ರಾಜೀವ್ ಗಾಂಧಿ ಸರ್ಕಾರದ ತಪ್ಪು ಎಂದು ಹೇಳಿ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದರು. ಆದರೆ ಕಾಂಗ್ರೆಸ್ ಈ ಆರೋಪವನ್ನು ಒಪ್ಪಿಕೊಳ್ಳಲು ನಿರಾಕರಿಸಿದೆ.