

ನವದೆಹಲಿ: ಹಲವು ದಿನಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ದಕ್ಷಿಣ ಭಾರತದ ಬಹುಭಾಷಾ ನಟಿ ಮನೋರಮಾ(78) ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮನೋರಮಾ ಅವರಿಗೆ ನಿನ್ನೆ ರಾತ್ರಿ ತೀವ್ರ ಉಸಿರಾಟ ಸಮಸ್ಯೆ ಎದುರಾಗಿದೆ. ಹೀಗಾಗಿ ಮನೋರಮಾ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ತಡರಾತ್ರಿಯೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
2002ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಾತ್ರರಾಗಿದ್ದ ನಟಿ ಮನೋರಮಾ ಅವರು ಅಭಿಮಾನಗಳ ಆಚಿ ಮನೋರಮಾ ಎಂದೇ ಖ್ಯಾತಿ ಗಳಿಸಿದ್ದರು. ಮೂಲತಃ ರಂಗಭೂಮಿ ಕಲಾವಿದೆಯಾಗಿದ್ದ ಮನೋರಮಾ, 1937ರ ಮೇ 26ರಂದು ತಮಿಳುನಾಡಿನ ತಂಜಾವೂರ್ ಜಿಲ್ಲೆಯ ಮನ್ನಾರ್ ಗುಡಿಯಲ್ಲಿ ಜನಿಸಿದ್ದರು. ಮನೋರಮಾ ಅವರ ನಿಜವಾದ ಹೆಸರು 'ಗೋಪಿಶಾಂತ'.
ಅಂದಿನ ಪ್ರತಿಷ್ಟಿತ ನಾಟಕ ಕಂಪನಿ ಎಂದೇ ಖ್ಯಾತಿ ಗಳಿಸಿದ್ದ ಎಸ್ಎಸ್ಆರ್ ನಾಟಕ ಕಂಪನಿಯಲ್ಲಿ ಕಲಾವಿದರಾಗಿ ನಟಿಸುತ್ತಿದ್ದ ಮನೋರಮಾ 1958ರಲ್ಲಿ 'ಮಾಲಾಯಿತ್ತಾ ಮಾಂಗೈ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. 1963 ರಲ್ಲಿ ಕೊಂಜುಮ್ ಕುಮಾರಿ ಎಂಬ ತಮಿಳು ಚಿತ್ರದ ಮೂಲಕ ಮೊದಲ ಬಾರಿಗೆ ನಾಯಕ ನಟಿಯಾಗಿ ಹೊರಹೊಮ್ಮಿದ್ದರು.
ಅಂದಿನಿಂದ ತಮ್ಮ ಚಿತ್ರರಂಗ ಜೀವನವನ್ನು ಪ್ರಾರಂಭಿಸಿದ ಮನೋರಮಾ ಅವರು ತಮ್ಮ ವಿಶಿಷ್ಟ ನಟನೆಯ ಮೂಲಕ ಬಹುಬೇಗ ಅಭಿಮಾನಗಳ ಹೃದಯಕ್ಕೆ ಹತ್ತಿರವಾದರು. ಅಲ್ಲದೆ, ದಕ್ಷಿಣ ಭಾರತದ ದಿಗ್ಗಜರು ಎಂದೇ ಖ್ಯಾತಿಗಳಿಸಿರುವ ಶಿವಾಜಿ ಗಣೇಶನ್, ಜಯಲಲಿತಾ, ಕಮಲ್ ಹಾಸನ್, ರಜನೀಕಾಂತ್, ನಾಗೇಶ್, ಶ್ರೀನಿವಾಸನ್ ಸೇರಿದಂತೆ ಹಲವು ಪ್ರಮುಖ ನಾಯಕರು ಜೊತೆ ನಟಿಸಿ, ಅತೀ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ನಟಿ ಎಂದು ಖ್ಯಾತಿಗಳಿಸಿದ್ದರು. ಮನೋರಮಾ ಅವರು ಈ ವರೆಗೂ 1200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಮಾಡಿದ್ದು, ಅತೀ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಗಿನ್ನಿಸ್ ದಾಖಲೆ ಬರೆದಿದ್ದರು.
ಇನ್ನುಳಿದಂತೆ 1964ರಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟಿದ್ದ ಮನೋರಮಾ ಅವರು ರಾಮನಾಥನ್ ಎಂಬುವವರ ಜೊತೆ ವಿವಾಹವಾಗಿದ್ದರು. ಆದಾವ ಕಾರಣಕ್ಕೋ ಏನೋ ಮದುವೆಯಾದ 2 ವರ್ಷದಲ್ಲೇ ಪತಿಯಿಂದ ವಿಚ್ಛೇದನ ಪಡೆದು ದೂರವಿದ್ದರು. 2002ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದ ಮನೋರಮಾ ಅವರು ತಮಿಳು ಮಾತ್ರವಲ್ಲದೆ ಮಲಯಾಳಂ, ಹಿಂದಿ, ತೆಲಗು ಚಿತ್ರಗಳಲ್ಲೂ ನಟನೆ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಇದೀಗ ಮನೋರಮಾ ಅವರ ಅಗಲಿಕೆಗೆ ಚಿತ್ರರಂಗ ಕಂಬನಿ ಮಿಡಿದಿದೆ.