

ನವದೆಹಲಿ: ವಿಧಾನಾಸಭಾ ಚುನಾವಣೆಗಳು ನಡೆಯುತ್ತಿರುವ ಬಿಹಾರದಲ್ಲಿ ಬಿಜೆಪಿ ಪ್ರಕಟಿಸಿದ್ದ ಎರಡು ಜಾಹೀರಾತುಗಳ ಮೇಲೆ ಚುನಾವಣಾ ಆಯೋಗ ನಿಷೇಧ ಹೇರಿದೆ.
ಬಿಹಾರದ ಚುನಾವಣಾ ಅಧಿಕಾರಿ ಅಜಯ್ ನಾಯಕ್ ಅವರಿಗೆ ಖಡಕ್ ಸೂಚನೆ ನೀಡಿರುವ ಆಯೋಗ ಈ ಎರಡು ಜಾಹೀರಾತುಗಳು ಯಾವುದೇ ಪತ್ರಿಕೆಯಲ್ಲಿ ಪ್ರಕಟವಾಗದಂತೆ, ಎಳ್ಳು ಪ್ರಸಾರವಾಗದಂತೆ ನೋಡಿಕೊಳ್ಳಲು ಸೂಚಿಸಿದೆ.
ಒಂದು ಜಾಹೀರಾತಿನಲ್ಲಿ ಜೆ ಡಿ ಯು ಮುಖಂಡ ನಿತೀಶ್ ಕುಮಾರ್ ಮತ್ತು ಆರ್ ಜೆ ಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ "ದಲಿತರ ತಟ್ಟೆಯಿಂದ ಕಸಿದು" ಮೀಸಲಾತಿಯನ್ನು ಹಿಂದುಳಿದ ವರ್ಗಕ್ಕೆ ಮತ್ತು ಅಲ್ಪಸಂಖ್ಯಾತರಿಗೆ ನೀಡಲಾಗುತ್ತಿದೆ ಎಂಬ ದ್ವೇಷಪೂರ್ಣ ಮಾಹಿತಿ ಪ್ರಕಟಿಸಿದ್ದರು.
ಮತ್ತೊಂದು ಜಾಹೀರಾತಿನಲ್ಲಿ "ವೋಟಿನ ಹೊಲ" ಎಂದು ತಿಳಿಸಿ ಅಲ್ಪಸಂಖ್ಯಾತರ ಮತ ಓಲೈಕೆಗಾಗಿ ಆರ್ ಜೆ ಡಿ, ಜೆ ಡಿ ಯು ಮತ್ತು ಕಾಂಗ್ರೆಸ್ ಭಯೋತ್ಪಾದಕರಿಗೆ ಅಭಯಾರಣ್ಯ ನೀಡುತ್ತಿವೆ ಎಂದು ಆರೋಪಿಸಲಾಗಿತ್ತು.
ಈ ಜಾಹೀರಾತುಗಳನ್ನು ಪಾಟ್ನಾದ ಪ್ರಮುಖ ಹಿಂದಿ ದಿನಪತ್ರಿಕೆಗಳಲ್ಲಿ ಈಗಾಗಲೇ ಪ್ರಕಟಿಸಲಾಗಿತ್ತು.
ಈ ಜಾಹೀರಾತನ್ನು ಪ್ರಸಾರ ಮಾಡದಂತೆ ಬಿಜೆಪಿ ಪಕ್ಷಕ್ಕೆ ತಿಳಿಸಬೇಕೆಂದು ಕೂಡ ರಾಜ್ಯ ಸಿ ಇ ಒ ಗೆ ಆಯೋಗ ಆದೇಶಿಸಿದೆ.