ಪ್ರವಾಸೋದ್ಯಮಕ್ಕೆ 1800 ಕೋಟಿ ಬಂಡವಾಳ

ಕರ್ನಾಟಕದ ಪ್ರವಾಸೋದ್ಯಮ ಕ್ಷೇತ್ರಕ್ಕೆ ರು.1800 ಕೋಟಿ ಬಂಡವಾಳ ಹೂಡಿಕೆಗೆ ಉದ್ಯಮಿಗಳು ಮುಂದೆ ಬಂದಿದ್ದಾರೆ...
ಪಾಟಾ ಅಂತಾರಾಷ್ಟ್ರೀಯ ಪ್ರವಾಸಿ ಮೇಳದಲ್ಲಿ ಪಾಲ್ಗೊಂಡಿದ್ದ ಸಚಿವ ಆರ್ ವಿ ದೇಶಪಾಂಡೆ
ಪಾಟಾ ಅಂತಾರಾಷ್ಟ್ರೀಯ ಪ್ರವಾಸಿ ಮೇಳದಲ್ಲಿ ಪಾಲ್ಗೊಂಡಿದ್ದ ಸಚಿವ ಆರ್ ವಿ ದೇಶಪಾಂಡೆ

ಬೆಂಗಳೂರು: ಕರ್ನಾಟಕದ ಪ್ರವಾಸೋದ್ಯಮ ಕ್ಷೇತ್ರಕ್ಕೆ ರು.1800 ಕೋಟಿ ಬಂಡವಾಳ ಹೂಡಿಕೆಗೆ ಉದ್ಯಮಿಗಳು ಮುಂದೆ ಬಂದಿದ್ದಾರೆ.

ಅಚ್ಚರಿ ಎಂದರೆ ಈ ಪೈಕಿ ಸಾವಿರ ಕೋಟಿ ರುಪಾಯಿ ಶಿವಮೊಗ್ಗ ಜೋಗದಲ್ಲಿ ಹೂಡಿಕೆಯಾಗುತ್ತಿದೆ. ಇಲ್ಲಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಡೆಯುತ್ತಿರುವ ಪಾಟಾ  ಅಂತಾರಾಷ್ಟ್ರೀಯ ಪ್ರವಾಸಿ ಮೇಳದಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿಗಳು ಉದ್ಯಮಿಗಳೊಂದಿಗೆ ಈ ಸಂಬಂಧ ಒಡಂಬಡಿಕೆ ಮಾಡಿಕೊಂಡರು. ಪ್ರವಾಸೋದ್ಯಮ ಸಚಿವ ಆರ್ ವಿ ದೇಶಪಾಂಡೆ  ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉದ್ಯಮಿಗಳಿಗೆ ಸರ್ಕಾರದಿಂದ ಒಡಂಬಡಿಕೆ ಪತ್ರವನ್ನು ಹಸ್ತಾಂತರಿಸಿದರು. ಈ ವೇಳೆ ಮಾತನಾಡಿದ ಆರ್ ವಿ ದೇಶಪಾಂಡೆ, ಬಂಡವಾಳ  ಹೂಡಿಕೆಯ ವಾಗ್ದಾನ ಕೇವಲ ವಾಗ್ದಾನವಾಗಿ ಉಳಿಯದೇ ಅನುಷ್ಠಾನಕ್ಕೆ ಬರುತ್ತದೆಂಬ ವಿಶ್ವಾಸವಿದೆ. ನಾನು ಖುದ್ದು ಯೋಜನೆ ಅನುಷ್ಠಾನಕ್ಕೆ ಸರ್ಕಾರದಿಂದ ಆಗಬೇಕಾದ ಎಲ್ಲ ಸಹಕಾರ  ನೀಡುತ್ತೇನೆ ಎಂದು ಭರವಸೆ ನೀಡಿದರು.

ರು.1800 ಕೋಟಿಗೆ ಸಂಬಂಧಿಸಿದಂತೆ 30 ಒಡಂಬಡಿಕೆಗಳ ಹಸ್ತಾಂತರ ಕಾರ್ಯ ನಡೆಯಿತು. ಆಕರ್ಷಿಸಿದ ಪ್ರದರ್ಶನ: ಇಡೀ ವಿಶ್ವದ ಪ್ರವಾಸೋದ್ಯಮದ ಚಿತ್ರಣವನ್ನು ಕಣ್ಣೆದುರಿಗೆ ತಂದು  ನಿಲ್ಲಿಸುವಂತಹ ವಿಶೇಷ ಪ್ರದರ್ಶನ ಮಳಿಗೆ ಪಾಟಾ ಸಮ್ಮೇಳನದ ಎರಡನೇ ದಿನದ ವಿಶೇಷವಾಗಿತ್ತು. ಬೆಳಿಗ್ಗೆ ಕೇಂದ್ರ ಸಚಿವ ಅನಂತ ಕುಮಾರ್ ಈ ಪ್ರದರ್ಶನ ಕೇಂದ್ರವನ್ನು ಉದ್ಘಾಟಿಸಿದರು.  ಪ್ರಮುಖವಾಗಿ ಕಲಾವಿದ ಶಶಿಧರ ಅಡಪ ತಂಡ ಸೃಷ್ಟಿಸಿರುವ ಮೈಸೂರು ಅರಮನೆ ದರ್ಬಾರ್ ಹಾಲ್‍ನ ಮರು ಸೃಷ್ಟಿ ವಿದೇಶಿ ಮತ್ತು ದೇಶೀಯ ಪ್ರತಿನಿಧಿಗಳನ್ನು ಸೆಳೆಯಿತು. ಹಾಗೆಯೇ ವಿವಿಧ  ರಾಜ್ಯಗಳಗಳ ಪ್ರವಾಸೋದ್ಯಮ ಇಲಾಖೆಯ ಮಳಿಗೆಗಳು, ವಿವಿಧ ದೇಶದ ಪ್ರವಾಸೋದ್ಯಮ ಮಳಿಗೆಗಳು ತಮ್ಮಲ್ಲಿನ ಪ್ರವಾಸೋದ್ಯಮ ಅವಕಾಶವನ್ನು ಪ್ರತಿ ನಿಧಿಗಳಿಗೆ ವಿವರಿಸಿದವು. ವಿವಿಧ  ದೇಶ ಗಳಿಂದ ಕಲಾವಿದರೂ ಸಹ ಅಲ್ಲಿಗಾಗಮಿಸಿ ತಮ್ಮ ದೇಶದ ಕಲೆ ಸಂಸ್ಕೃತಿಯ ಹಿರಿಯಮೆಯನ್ನು ಪ್ರಸ್ತುತಪಡಿಸಿ ಕಳೆಗಟ್ಟಿದರು.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಸ್ತಾವನೆ
ಶಿವಮೊಗ್ಗದಲ್ಲಿ ಅರ್ಧಕ್ಕೆ ನಿಂತಿರುವ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸುವುದಾಗಿ ದುಬೈನ ಉದ್ಯಮಿ ಬಿ ಆರ್ ಶೆಟ್ಟಿ ಮುಂದೆ ಬಂದಿದ್ದಾರೆ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ  ಸಲ್ಲಿಸಿದ್ದಾರೆ. ಸದ್ಯ ತಾಂತ್ರಿಕ ಕಾರಣದಿಂದ ಅರ್ಧಕ್ಕೆ ನಿಂತಿರುವ ಶಿವಮೊಗ್ಗ ವಿಮಾನ ನಿಲ್ದಾಣದ ಸಮಸ್ಯೆಯನ್ನು ಬಗೆಹರಿಸಿ ಅನುಮತಿ ನೀಡಿದರೆ ಅಂತಾರಾಷ್ಟ್ರೀಯ ಮಟ್ಟದ ವಿಮಾನ  ನಿಲ್ದಾಣವಾಗಿ ರೂಪಿಸಲು ನಾವು ಸಿದ್ಧ ಎಂದು ಬಿ.ಆರ್.ಶೆಟ್ಟಿಯವರ ಉದ್ಯಮ ಪ್ರತಿನಿಧಿ ತಿಳಿಸಿದ್ದಾರೆ. ಶಿವಮೊಗ್ಗದ ವಿಮಾನ ನಿಲ್ದಾಣ ಆಗುವುದರಿಂದ ಸುತ್ತಮುತ್ತಲಿನ 68 ಜಿಲ್ಲೆಗಳಿಗೆ  ಅನುಕೂಲವಾಗುತ್ತದೆ. ಅಲ್ಲಿನ ಆರ್ಥಿಕ ಪರಿಸ್ಥಿತಿ, ಕೈಗಾರಿಕೆಗಳೂ ಚೇತರಿಸಿಕೊಳ್ಳುತ್ತವೆ. ಸರ್ಕಾರ ಆಸಕ್ತಿ ತೋರಿಸಿ ಮುಂದೆ ಬಂದರೆ ನಾವು ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ಸಿದ್ಧ ಇರುವುದಾಗಿ ವಿವರಿಸಿದರು.

ಪ್ರಮುಖ ಯೋಜನೆಗಳು
ಶಿವಮೊಗ್ಗ ಜಿಲ್ಲೆ ಜೋಗದಲ್ಲಿ ಸಮಗ್ರ ಅಭಿವೃದ್ಧಿ ರು.1000 ಕೋಟಿ
ಬೆಂಗಳೂರು ವೈಟ್‍ ಫೀಲ್ಡ್ ನಲ್ಲಿ ಎಂಟರ್‍ಟೈನ್‍ಮೆಂಟ್ ಮತ್ತು ವಾಟರ್‍ಸ್ಪೋಟ್ರ್ಸ್ ರು.182.71 ಕೋಟಿ
ಮೈಸೂರು ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ರು.70 ಕೋಟಿ
ಮೈಸೂರು, ಕೂರ್ಗ್‍ನಲ್ಲಿ ರೆಸಾರ್ಟ್ ರು.100 ಕೋಟಿ
ಕಬಿನಿಯಲ್ಲಿ ವೈಲ್ಡ್ ಲೈಫ್ ರೆಸಾರ್ಟ್ ರು.50 ಕೋಟಿ
ಮಡಿಕೇರಿಯಲ್ಲಿ ಇಕೋ ಟೂರಿಸಂ ಯೋಜನೆ ರು.50 ಕೋಟಿ
ಮಡಿಕೇರಿಯಲ್ಲಿ ರೆಸಾರ್ಟ್ ಸ್ಪಾ ರು.50 ಕೋಟಿ
ಕುಮಟಾ ತಾಲೂಕಿನ ಹಾರ್ಬಾಗ್‍ನಲ್ಲಿ ರೆಸಾರ್ಟ್ ರು.47 ಕೋಟಿ
ಮೈಸೂರಿನಲ್ಲಿ ಗಾಲ್ಫ್ ಟೂರಿಸಂ ರು.46 ಕೋಟಿ
ನಂದಿ ಬೆಟ್ಟಕ್ಕೆ ರೋಪ್‍ವೇ ರು.24.50 ಕೋಟಿ
ಅಲಸೂರು ಕೆರೆಯಲ್ಲಿ ಹೋಟೆಲ್ ರು.40 ಕೋಟಿ
ಬಾದಮಿಯಲ್ಲಿ ರೆಸಾರ್ಟ್ ರು.28 ಕೋಟಿ
ಬಳ್ಳಾರಿ ಜಿಲ್ಲೆಯಲ್ಲಿ ಹೊಟೇಲ್, ಪ್ರವಾಸೋದ್ಯಮ ಕೌಶಲ್ಯ ತರಬೇತಿ ಕೇಂದ್ರ ರು.20 ಕೋಟಿ
ಕೂರ್ಗ್‍ನಲ್ಲಿ ರೆಸಾರ್ಟ್ ರು.20
ದೇವನಹಳ್ಳಿಯಲ್ಲಿ ಹೆಲ್ತ್ ವೆಲ್‍ನೆಸ್ ಟೂರಿಸಂ ಕೇಂದ್ರ ರು.18 ಕೋಟಿ
ಚಿಕ್ಕಬಳ್ಳಾಪುರದಲ್ಲಿ ರೆಸಾರ್ಟ್ ರು.16 ಕೋಟಿ

ಇದಲ್ಲದೇ ಬಿಜಾಪುರ, ಚಿಕ್ಕಮಗಳೂರು, ಹಾಸನ, ಜೋಗದಲ್ಲಿ ರೆಸಾರ್ಟ್, ಹೊಟೇಲ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಒಡಂಬಡಿಕೆಗಳು ನಡೆದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com