ರಾಜ್ಯದಲ್ಲಿ ಬಿಗಡಾಯಿಸಿದ ವಿದ್ಯುತ್ ಕ್ಷಾಮ: ಗಣೇಶೋತ್ಸವದ ಮೇಲೆ "ಕರಿ ನೆರಳು"

ರಾಜ್ಯದಲ್ಲಿ ಬರ ತಂದ ವಿದ್ಯುತ್ ಕ್ಷಾಮ ಸೃಷ್ಟಿಸಿರುವ ಕತ್ತಲ ಪರ್ವ ಇನ್ನಷ್ಟು ಭೀಕರವಾಗಿದ್ದು, ಈ ಬಾರಿ ಗಣೇಶೋತ್ಸವಕ್ಕೆ ಕೂಡ ಕಗ್ಗತ್ತಲು ಕವಿಯುವುದು ಖಚಿತವಾಗಿದೆ...
ಕಗ್ಗತ್ತಲೆಯಲ್ಲಿ ಕರ್ನಾಟಕ
ಕಗ್ಗತ್ತಲೆಯಲ್ಲಿ ಕರ್ನಾಟಕ

ಬೆಂಗಳೂರು: ರಾಜ್ಯದಲ್ಲಿ ಬರ ತಂದ ವಿದ್ಯುತ್ ಕ್ಷಾಮ ಸೃಷ್ಟಿಸಿರುವ ಕತ್ತಲ ಪರ್ವ ಇನ್ನಷ್ಟು ಭೀಕರವಾಗಿದ್ದು, ಈ ಬಾರಿ ಗಣೇಶೋತ್ಸವಕ್ಕೆ ಕೂಡ ಕಗ್ಗತ್ತಲು ಕವಿಯುವುದು ಖಚಿತವಾಗಿದೆ.

ಮುಂಗಾರು ವೈಫಲ್ಯ, ಬರಿದಾರ ಜಲವಿದ್ಯುತ್ ಉತ್ಪಾದನಾ ಜಲಾಶಯಗಳು, ವಿದ್ಯುತ್ ಖರೀದಿಗೆ ಎದುರಾಗಿರುವ ಆರ್ಥಿಕ ಬಿಕ್ಕಟ್ಟು,.. ಹೀಗೆ ಸಾಲುಸಾಲು ಸಂಕಷ್ಟಗಳು ಇದೀಗ ಇಡೀ  ರಾಜ್ಯವನ್ನು ಕತ್ತಲ ಕೂಪಕ್ಕೆ ತಳ್ಳಿವೆ. ಮುಂಗಾರು ಕೈಕೊಟ್ಟಿದ್ದರಿಂದ ಜಲವಿದ್ಯುತ್ ಯೋಜನಾ ಜಲಾಶಯಗಳಲ್ಲಿ ತೀವ್ರ ನೀರಿನ ಕೊರತೆ ಎದುರಾಗಿದೆ. ಹಾಗಾಗಿ ಇನ್ನೂ ಮೂರು ತಿಂಗಳು  ವಿದ್ಯುತ್ ಅಭಾವ ಕಾಡಲಿದ್ದು, ಜನತೆ ಅನಿವಾರ್ಯವಾಗಿ ವಿದ್ಯುತ್ ಕೊರತೆಯಿಂದಾಗುವ ಸಮಸ್ಯೆಗಳನ್ನು ಸಹಿಸಿಕೊಳ್ಳಬೇಕಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಅಷ್ಟೇ ಅಲ್ಲ. ಈ ಬಾರಿ  ಗಣೇಶೋತ್ಸವಗಳಿಗೂ ವಿದ್ಯುತ್ ಬಳಕೆಗೆ ಕಡಿವಾಣ ಹಾಕುವ ಮೂಲಕ ಹಬ್ಬಕ್ಕೂ ಕರೆಂಟ್ ಶಾಕ್ ನೀಡಲು ಸಜ್ಜಾಗಿದೆ.

ವಿದ್ಯುತ್ ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರ ಹೆಚ್ಚಾಗುತ್ತಿದ್ದು ಇದನ್ನು ಉಳಿತಾಯ ಮತ್ತು ಇತರೆ ಉಪಾಯಗಳ ಮೂಲಕ ಸರಿದೂಗಿಸಲು ಯತ್ನಿಸಲಾಗುತ್ತಿದೆ. ಆದ್ದರಿಂದ ರಾಜ್ಯದ  ಜನತೆ ವಿದ್ಯುತ್ ಅಭಾವದ ವಿಷಯದಲ್ಲಿ ಸಹಕರಿಸಬೇಕು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಬರ ಆವರಿಸಿದ್ದು, ಜಲಾಶಯಗಳು  ಬರಿದಾಗಿವೆ.

ಇಂಥ ಸಂದರ್ಭದಲ್ಲಿ ನೀರಿನಿಂದ ವಿದ್ಯುತ್ ಉತ್ಪಾದನೆ ಕಷ್ಟಸಾಧ್ಯವಾಗಿರುವ ಕಾರಣ ವಿದ್ಯುತ್ ಬರ ಎದುರಾಗಿದೆ. ಅದನ್ನು ಹಂತಹಂತವಾಗಿ ಪರಿಹರಿಸಲಾಗುತ್ತಿದೆ. ಹಾಗೆಯೇ ವಿದ್ಯುತ್ ಉಳಿತಾಯಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕವೂ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಬುಧವಾರ ಸುದ್ದಿಗಾರರಿಗೆ ತಿಳಿಸಿದರು. ಒಟ್ಟಾರೆ ರಾಜ್ಯದ 8000 ಮೆ.ವ್ಯಾ. ವಿದ್ಯುತ್ ಬೇಡಿಕೆಗೆ ಬದಲಾಗಿ 6500 ಮೆ.ವ್ಯಾ. ಮಾತ್ರ ಪೂರೈಕೆಯಾಗುತ್ತಿದ್ದು, ಇದರ ಮಧ್ಯೆ ಆರ್‍ಟಿಪಿ ಎಸ್ ಮತ್ತು ಬಿಟಿಪಿಎಸ್‍ನ ತಲಾ ಎರಡೂ ಘಟಕಗಳು ತಾಂತ್ರಿಕ ಕಾರಣಗಳಿಂದ ಸ್ಥಗಿತವಾಗಿವೆ.  ಇನ್ನು ಪೀಕ್ ಅವರ್‍ನಲ್ಲಿ ಶೇ.20ರಷ್ಟು ವಿದ್ಯುತ್ ಬೇಡಿಕೆ ಹೆಚ್ಚಾಗಿದ್ದು, ಇದನ್ನು ಉಳಿತಾಯದ ಮೂಲಕ ಸರಿಪಡಿಸಲಾಗುವುದು ಎಂದರು. ಸದ್ಯ ಲಭ್ಯವಿರುವ 6500 ಮೆ.ವ್ಯಾ. ವಿದ್ಯುತ್ ನಲ್ಲಿ ಮೆಸ್ಕಾಂಗೆ 513 ಮೆ.ವ್ಯಾ., ಬೆಸ್ಕಾಂಗೆ 3015ಮೆ.ವ್ಯಾ., ಹೆಸ್ಕಾಂಗೆ 1235ಮೆ.ವ್ಯಾ., ಸೆಸ್ಕ್ ಗೆ 983ಮೆ.ವ್ಯಾ. ಹಾಗೂ ಜೆಸ್ಕಾಂಗೆ 754ಮೆ.ವ್ಯಾ. ಪೂರೈಸಲಾಗುತ್ತಿದೆ. ಕೊರತೆ ಸರಿಪಡಿಸಲು ನಿಯಮಿತ ಲೋಡ್‍ಶೆಡ್ಡಿಂಗ್ ಜಾರಿಗೊಳಸಲಾಗುತ್ತಿದೆ.

ಸದಕ್ಕೆ ಬೆಸ್ಕಾಂ ವ್ಯಾಪ್ತಿಯಲ್ಲಿ ವಸತಿ ಪ್ರದೇಶದಲ್ಲಿ ದಿನಕ್ಕೆ 4ಗಂಟೆ, ಕೈಗಾರಿಕೆ ಮತ್ತು ವಾಣಿಜ್ಯ ಪ್ರದೇಶಕ್ಕೆ ನಿತ್ಯ 2ಗಂಟೆ ಲೋಡ್‍ಶೆಡ್ಡಿಂಗ್ ಮಾಡಲಾಗುತ್ತಿದೆ. ಇತರೆ ಎಸ್ಕಾಂಗಳಿಗೆ ಭೇಟಿ ನೀಡಿ  ಅಲ್ಲಿಯೂ ನಿಯಮಿತ ರೀತಿಯಲ್ಲಿ ವಿದ್ಯುತ್ ಕಡಿತವಾಗುವಂತೆ ಸಮಯ ನಿಗದಿ ಮಾಡಲಾಗುವುದು. ಆದರೆ ವಿದ್ಯುತ್ ಕಡಿತದಿಂದ ಆಸ್ಪತ್ರೆ ಮತ್ತು ನೀರು ಪೂರೈಕೆ ಘಟಕಗಳಿಗೆ ವಿನಾಯಿತಿ ನೀಡಲಾಗುತ್ತಿದೆ ಎಂದು ಸಚಿವರು ವಿವರಿಸಿದರು. ಕೊರತೆ ಸರಿಪಡಿಸಲು 900ಮೆ.ವ್ಯಾ. ವಿದ್ಯುತ್ ಖರೀದಿಸಲಾಗಿದ್ದು, ಇದರ ಮೂಲಕ ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರ ಕಡಿಮೆ ಮಾಡಲಾಗುವುದು ಎಂದರು.

ಗಣೇಶನಿಗೆ ಕತ್ತಲೆ ಪೂಜೆ!
ಈ ಬಾರಿ ಗಣೇಶ ಉತ್ಸವ ವೇಳೆ ಸಂಘಟನೆಗಳು ಬೀದಿ ದೀಪದಿಂದ ಸಂಪರ್ಕ ಪಡೆದು ಸಂಭ್ರಮಿಸಿದರೆ ಜೈಲಿಗೆ ಹೋಗಬಹುದು! ಹೌದು, ರಾಜ್ಯದಲ್ಲಿ ವಿದ್ಯುತ್ ಕೊರತೆ ಇರುವುದರಿಂದ  ಸರ್ಕಾರ ವಿದ್ಯುತ್ ದುರ್ಬಳಕೆ ಮತ್ತು ಕಳ್ಳತನದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದೆ. ಬೀದಿ ದೀಪದ ಕಂಬಗಳಿಂದ ವಿದ್ಯುತ್ ಸಂಪರ್ಕ ಪಡೆದು ಸಿಕ್ಕಿಬಿದ್ದವರ ವಿರುದ್ಧ ಕ್ರಿಮಿನಲ್ ಕೇಸು  ದಾಖಲಿಸಲಾಗುವುದು ಎಂದು ಡಿಕೆಶಿ ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com