

ಬೆಂಗಳೂರು: ವರ್ಷದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅವಧಿಯ 13ನೇ ಜನತಾದರ್ಶನವನ್ನು ಮಂಗಳವಾರ ನಡೆಸಲಿದ್ದಾರೆ. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸೆ.15ರಂದು ಬೆಳಗ್ಗೆ 9.30ಕ್ಕೆ ನಡೆಯಲಿದೆ. ಇದರೊಂದಿಗೆ ಪ್ರಜೆ ಮತ್ತು ಪ್ರಭು ನಡುವಿನ ನೇರ ಸಂಪರ್ಕ ಕಾರ್ಯಕ್ಕೆ ಪುನರ್ ಚಾಲನೆ ದೊರೆತಂದಾಗುತ್ತದೆ.
ರಾಜ್ಯದ ವಿವಿಧ ಮೂಲೆಗಳಿಂದ ಸಾರ್ವಜನಿಕರು ಕೃಷ್ಣಾದಲ್ಲಿ ಬಂದು ಮುಖ್ಯಮಂತ್ರಿ ಅವರಿಗೆ ನೇರವಾಗಿ ತಮ್ಮ ಅಹವಾಲುಗಳನ್ನು ಸಲ್ಲಿಸಲಿದ್ದು, ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳು ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಹಾಗೆ ನೋಡಿದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ವಾರದಲ್ಲಿ ಮೂರು ದಿನಗಳು ಜನತಾದರ್ಶನ ನಡೆಸು ತ್ತಿದ್ದರು. ಆದರೆ ಇದು ನಡೆದದ್ದು ಕೆಲವೇ ವಾರಗಳು ಮಾತ್ರ. ಆನಂತರ ರಾಜಕೀಯ ಒತ್ತಡ, ಪ್ರವಾಸ ಮತ್ತು ಅಧಿವೇಶನ ಕಾರಣ ದಿಂದಾಗಿ ಜನತಾದರ್ಶನ ಕಾರ್ಯ ಕ್ರಮವೇ ನಿಂತು ಹೋಗಿತ್ತು.
ಆದರೆ ತವರಿ ಜಿಲ್ಲೆ ಮೈಸೂರಿನಲ್ಲಿ ಮಾತ್ರ ಆಗಾಗ ಜನರಿಂದ ಅಹವಾಲು ಸ್ವೀಕರಿಸುತ್ತಿದ್ದರು. ಆನಂತರ ಅದೂ ಕಡಿಮೆಯಾಗಿ ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ನಗರ ಪ್ರದಕ್ಷಿಣ ಶುರುವಾಗಿತ್ತು. ಹೀಗೆ ಜನರ ಸಮಸ್ಯೆಗಳನ್ನು ಆಲಿಸುವ ಕಾರ್ಯಕ್ರಮ ಕಾಲಮಾನಕ್ಕೆ ತಕ್ಕಂತೆ ಬದಲಾಗಿ ಸಂಪೂರ್ಣ ಸ್ಥಗಿತವಾಗಿತ್ತು. ಹೀಗಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ಈತಕ 12 ಜನತಾದರ್ಶನಗಳನ್ನು ನಡೆಸಿದ್ದು, 13ನೇ ಜನತಾದರ್ಶನ ಮಂಗಳವಾರ ನಡೆಯಲಿದೆ.