ಸಂಪುಟ ಪುನಾರಚನೆ ಕಸರತ್ತು ಶುರು

ಬೆಂಗಳೂರು: ಸಚಿವ ಸಂಪುಟ ಪುನಾರಚನೆಯ ಭಾರಿ ಕಸರತ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳಿವು ನೀಡುತ್ತಿದ್ದಂತೆ ಕಾಂಗ್ರೆಸ್ ಪಾಳಯದಲ್ಲಿ ಚಟುವಟಿಕೆಗಳು ಚಿಗುರೊಡೆದಿದ್ದು, ಆಕಾಂಕ್ಷಿಗಳ ಲಾಬಿ ಪ್ರಕ್ರಿಯೆ ಆರಂಭವಾಗಿದೆ.
ಸಿಎಂ ಸಿದ್ದರಾಮಯ್ಯ, ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರ ನಿವಾಸಕ್ಕೆ ಸಂಪುಟ ಸೇರುವ ಆಕಾಂಕ್ಷೆ ಹೊತ್ತವರು ಹಾಗೂ ಸಂಪುಟದಿಂದ ಹೊರ ಹೋಗುವ ಅಪಾಯದಲ್ಲಿರುವ ನಾಯಕರು ಭೇಟಿ ನೀಡಿ ಭಿನ್ನವತ್ತಳೆಯ ಮಳೆ ಸುರಿಸಿದ್ದಾರೆ. ಅಪರೂಪಕ್ಕೋ ಎಂಬಂತೆ ರಾಜ್ಯ ಕಾಂಗ್ರೆಸ್ ಮೂರು ಪ್ರಭಾವಿ ಕೇಂದ್ರಗಳಲ್ಲಿ (ಸಿಎಂ, ಪರಮ್, ಖರ್ಗೆ) ಸಂಚಲನ ಆರಂಭಗೊಂಡಿದೆ.
ಸೆ.23- ರವರೆಗೂ ರಾಜ್ಯದಲ್ಲಿ ಇಂಥ ನಿಯೋಗ ಭೇಟಿ, ಮಂತ್ರಾಲೋಚನಾ ಸಭೆಗಳು ಹೆಚ್ಚಲಿದ್ದು, ಆ ಬಳಿಕ ಹೈಕಮಾಂಡ್ ಮಧ್ಯಪ್ರವೇಶವಾಗಲಿದೆ. ಪ್ರಸ್ತುತ ಲಭ್ಯವಾದ ಖಚಿತ ಮಾಹಿತಿ ಪ್ರಕಾರ, ಹೈಕಮಾಂಡ್ಗೆ ರಾಜ ಸರ್ಕಾರದ ಕಾರ್ಯ ನಿರ್ವಹಣೆಯ ಗತಿ ಇನ್ನಷ್ಟು ಹರಿತವಾಗಬೇಕಿದೆ. ಮುಂದಿನ ವಿಧಾನಸಭೆ ಚುನಾವಣೆಗೆ ಪೂರ್ವಭಾವಿಯಾಗಿ ನಡೆಯುವ ಮೊದಲ ಸರ್ಕಸ್ ಇದಾಗಲಿದ್ದು, ಹೊಸ ಹಾಗೂ ಉತ್ಸಾಹಿ ಮುಖಗಳಿಗೆ ಅವಕಾಶ ನೀಡಿ ಪಕ್ಷದ ವರ್ಚಸ್ಸು ಹೆಚ್ಚಿಸುವ ಉದ್ದೇಶ ಹೊಂದಲಾ- ಗಿದೆ. ರಾಜ್ಯಕ್ಕೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡುವುದಕ್ಕೆ ಮುಂಚಿತವಾಗಿಯೇ ಸಂಪುಟ ಪುನಾರಚನೆ ಪ್ರಕ್ರಿಯೆ ಮುಕ್ತಾಯಗೊಂಡರೂ ಆಶ್ಚರ್ಯವಿಲ್ಲ.
ಹೀಗಾಗಿ ಪ್ರಕ್ರಿಯೆ ಬಿರುಸುಗೊಂಡಿರುವುದಂತೂ ಸ್ಪಷ್ಟ. ಈ ಮಧ್ಯೆ ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತೀಕಟ್ಟಿ, ಮೋಟಮ್ಮ, ಶಾಸಕ ಎಚ್.ವೈ.ಮೇಟಿ, ಅರಕಲಗೂಡು ಮಂಜು, ಸಿದ್ದನ್ಯಾಮನಗೌಡ, ಶಿವಾನಂದ ಪಾಟೀಲ್, ಅಪ್ಪಾಜಿ ನಾಡಗೌಡ, ಯಶವಂತಗೌಡ ದೊಡ್ಡನಗೌಡ ಪಾಟೀಲ್, ಎ.ಕೃಷ್ಣಪ್ಪ , ಬಸವರಾಜ ರಾಯರೆಡ್ಡಿ, ಸೇರಿದಂತೆ ಹಲವು ಸಚಿವ ಸ್ಥಾನಾಕಾಂಕ್ಷಿಗಳು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಂಪುಟ ಪುನಾರಚನೆ ವೇಳೆ ತಮ್ಮ ಹೆಸರನ್ನು ಪರಿಗಣಿಸುವಂತೆ ಮನವಿ ಮಾಡಿದ್ದಾರೆ.
ಜತೆಗೆ ಈ ನಿಯೋಗ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಭೇಟಿ ಮಾಡಿ ಹಿರಿತನದ ಆಧಾರದ ಮೇಲೆ ಸಚಿವ ಸ್ಥಾನ ದೊರೆಯುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಿದ್ದಾರೆ. ಈಶ್ವರ ಖಂಡ್ರೆ, ರಾಜಶೇಖರ್ ಪಾಟೀಲ್, ಎ. ಮಂಜು, ಸಿದ್ದುನ್ಯಾಮಗೌಡ ಅವರು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಈ ಮಧ್ಯೆ ಬಾಬೂ ರಾವ್ ಚಿಂಚನ್ ಸೂರ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮ್ಮನ್ನು ಸಂಪುಟದಿಂದ ಕೈ ಬಿಡದಂತೆ ಆಗ್ರಹಿಸಿದ್ದಾರೆ. ಅಂಬರೀಶ್ ಅವರನ್ನು ಸಂಪುಟದಿಂದ ಕೈ ಬಿಡದಂತೆ ಆಗ್ರಹಿಸಿ ಮಂಡ್ಯ ಕಾಂಗ್ರೆಸ್ನ ಒಂದು ವರ್ಗ ಮನವಿ ಸಲ್ಲಿಸಿದೆ. ಇದೆಲ್ಲದರ ಜತೆಗೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರ ಜತೆಗೆ
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಕಚೇರಿಯಲ್ಲಿ ಸುದೀರ್ಘ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಸಂಪುಟ ಸೇರುವ ಮುನ್ಸೂಚನೆ ನೀಡಿದ ಪರಮ್: ಈ ಮಧ್ಯೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಪರಮೇಶ್ವರ ಅವರು ಸಂಪುಟ ಸೇರುವ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ಹೊಸ ಕೆಪಿಸಿಸಿ ಕಚೇರಿ ನಿರ್ಮಾಣದ ಪ್ರಗತಿ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಅನೌಪಚಾರಿಕರವಾಗಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಹಿಂದೆ ಮೈಸೂರು ಪ್ರದೇಶ ಕಾಂಗ್ರೆಸ್ನ ಅಧ್ಯಕ್ಷ ರಾಗಿ ವೆಂಕಟಪ್ಪ ಅವರು 7 ವರ್ಷ ಸೇವೆ ಸಲ್ಲಿಸಿದ್ದರು. ಕೆಪಿಸಿಸಿ ಅಧ್ಯಕ್ಷನಾಗಿ ಅತಿ ಹೆಚ್ಚು ಸೇವೆ ಸಲ್ಲಿಸಿದವನು ನಾನು. 2010, ಅಕ್ಟೋಬರ್ 29ರಂದು ನಾನು ಅಧಿಕಾರ ಸ್ವೀಕರಿಸಿದ್ದೆ. ಅಧಿಕಾರಾವಧಿಯಲ್ಲಿ ಹಲವು ಸವಾಲುಗಳನ್ನು ಕಂಡಿದ್ದೇನೆ. ಕಹಿ-ಸಿಹಿ ಅನುಭವವೂ ಆಗಿದೆ. ಮುಂದೆ ಬರುವ ವರಿಗೆ ಒಳ್ಳೆಯದಾಗಲಿ. ಇದರ್ಥ ನಾನು ಪಕ್ಷದ ಕೆಲಸ ಮಾಡುವುದರಲ್ಲಿ ಉತ್ಸಾಹ ಕಳೆದುಕೊಂಡಿದ್ದೇನೆ ಎಂದಲ್ಲ ಎನ್ನುವ ಮೂಲಕ ಕುತೂಹಲ ಸೃಷ್ಟಿಸಿದ್ದಾರೆ. ಯಾವುದೇ ಜವಾಬ್ದಾರಿ ಹೊರುವೆ: ಈ ಮಧ್ಯೆ ಪ್ರದೇಶ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಇಂಧನ ಸಚಿವ ಶಿವಕುಮಾರ್ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ, ಪಕ್ಷ ಹೇಳಿದರೆ ಯಾವುದೇ ಜವಾಬ್ದಾರಿ ಹೊರಲು ಸಿದ್ದ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಅವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಮಗೆ ಆ ಜವಾಬ್ದಾರಿ ನೀಡಿದರೆ ನಿಭಾಯಿಸುತ್ತೀರಾ ಎಂಬ ಪ್ರಶ್ನೆಗೆ ಈ ಉತ್ತರ ನೀಡಿರುವ ಅವರು ಹೈಕಮಾಂಡ್ ಬೇಕಾದರೆ ಪರಮೇಶ್ವರ ಅವರ ಅವಧಿಯನ್ನು ವಿಸ್ತರಿಸಲೂಬಹುದು ಎಂದು ಹೇಳಿದ್ದಾರೆ.
ಖರ್ಗೆ ಭಯಕ್ಕೆ ಡಿಸಿಎಂ ಹುದ್ದೆ ? ಈ ಮಧ್ಯೆ ಕೆಪಿಸಿಸಿ ಧ್ಯಕ್ಷ ಡಾ.ಜಿ.ಪರಮೇಶ್ವರ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಸಾಧ್ಯತೆ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಿರು ಪ್ರಯತ್ನ ಆರಂಭಿಸಿರುವ ಹಿನ್ನೆಲೆಯಲ್ಲಿ ಅವರು ರಾಜ್ಯ ರಾಜಕಾರಣಕ್ಕೆ ಆಗಮಿಸದಂತೆ ತಡೆಯಲು ಪರಮೇಶ್ವರ ಅವರಿಗೆ ಡಿಸಿಎಂ ಹುದ್ದೆ ನೀಡುವುದು ಒಂದು ಹಂತದಲ್ಲಿ ಕೆಲಸ ಮಾಡಬಹುದೆಂಬ ಸಲಹೆಯನ್ನು ಸಿಎಂ ಆಪ್ತರು ನೀಡಿದ್ದಾರೆ. ಆದರೆ ಈ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಅನಿರೀಕ್ಷಿತವಾಗಿ ಪರಮೇಶ್ವರ ಡಿಸಿಎಂ ಆದರೆ ಅದಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಆಗಮನದ ಬಗ್ಗೆ ಸಿದ್ದರಾಮಯ್ಯ ಹೊಂದಿರುವ ಭಯವೇ ಕಾರಣವಾಗಬಹುದೆಂಬ ವ್ಯಾಖ್ಯಾನ ಕೇಳಿ ಬರುತ್ತಿದೆ.
ಸ್ಪೀಕರ್ ಯಾರು ?: ಇದರ ಜತೆಗೆ ಕಾಗೋಡು ತಿಮ್ಮಪ್ಪ ಸಂಪುಟ ಸೇರುವ ಸಾಧ್ಯತೆ ಹಿನ್ನೆಲೆಯಲ್ಲಿ ಸ್ಪೀಕರ್ ಸ್ಥಾನವನ್ನು ಯಾರಿಗೆ ನೀಡುವುದು ಎಂಬ ಜಿಜ್ಞಾಸೆ ಸಿದ್ದರಾಮಯ್ಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಕಿಮ್ಮನೆ ರತ್ನಾಕರ ಅಥವಾ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಅವರನ್ನು ಸ್ಪೀಕರ್ ಪೀಠದ ಮೇಲೆ ಕುಳ್ಳಿರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ವೀರಶೈವರಿಗೆ ಅಧ್ಯಕ್ಷ ಸ್ಥಾನ: ಪರಮೇಶ್ವರ ಅವರ ನಿರ್ಗಮನದ ನಂತರ ತೆರವಾಗುವ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಅಪ್ಪಾಜಿ ನಾಡಗೌಡ ಅಥವಾ ಎಸ್.ಆರ್ .ಪಾಟೀಲ್ ಅವರು ನೇಮಕಗೊಳ್ಳುವುದು ಬಹುತೇಕ ಖಚಿತವಾಗಿದ್ದು, ಕೃಷ್ಣಭೈರೇಗೌಡ ಅವರನ್ನು ಕಾರ್ಯಾಧ್ಯಕ್ಷ ಸ್ಥಾನಕ್ಕೆ ನಿಯೋಜನೆ ಮಾಡಬಹುದು ಎನ್ನಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


