

ಬೆಂಗಳೂರು: ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಅವರಿಗೆ ಪುತ್ರ ಅಶ್ವಿನ್ ರಾವ್ ಲೋಕಾಯುಕ್ತ ಸಂಸ್ಥೆಯಲ್ಲಿ ನಡೆಸುತ್ತಿದ್ದ ಅಕ್ರಮ ಚಟುವಟಿಕೆಗಳ ಬಗ್ಗೆ ಎಲ್ಲಾ ಮಾಹಿತಿ ತಿಳಿದಿದ್ದರೂ ಅವರು ಮೌನವಾಗಿದ್ದರು ಎಂಬ ಸ್ಪಷ್ಟ ಮಾಹಿತಿ ವಿಶೇಷ ತನಿಖಾ ತಂಡದ ಆರೋಪ ಪಟ್ಟಿಯಿಂದ ಬಹಿರಂಗವಾಗಿದೆ.
ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಲೋಕಾಯುಕ್ತರು ತಮ್ಮ ನಿವಾಸದಲ್ಲಿ ಕೆಲಸಕ್ಕಿದ್ದ ಅಡುಗೆಯವನನ್ನು ಕೆಲಸಕ್ಕೆ ರಾಜಿನಾಮೆ ನೀಡಿ ಹೋಗುವಂತೆ ಸೂಚಿಸಿದ್ದರು. ಅಶ್ವಿನ್ ಹಾಗೂ ಆತನ ಕೂಟದ ಸಂಪೂರ್ಣ ಮಾಹಿತಿ ಅಡುಗೆ ಕೆಲಸದ ಸಂದೀಪನಿಗೆ ತಿಳಿದಿತ್ತು. ಕಪ್ಪ ಕಾಣಿಕೆ ಸ್ವೀಕರಿಸಿ ಅಶ್ವಿನ್ ರಾವ್ ಬೆಡ್‍ರೂಂಗೆ ತೆಗೆದುಕೊಂಡು ಹೋಗಿ ಇಡುತ್ತಿದ್ದ ಎಂಬ ಸ್ಪೋಟಕ ಮಾಹಿತಿ ಬೆಳಕಿಗೆ ಬರಲೂ ಆತನೇ ಕಾರಣ. ಏಕೆಂದರೆ ಇದಕ್ಕೆ ಅಡುಗೆಯವನೇ ಸಾಕ್ಷಿ. ಎಸ್ ಐಟಿ ಮುಂದೆ ಆತ ನೀಡಿದ ಕುತೂಹಲಕರ ಹೇಳಿಕೆಗಳ ಮಾಹಿತಿ ಇಲ್ಲಿದೆ...
ಅಶ್ವಿನ್‍ರಾವ್ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆ ಲೋಕಾಯುಕ್ತರ ವಸತಿಗೃಹದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಅಶ್ವಿನ್ ಚಟುವಟಿಕೆಗಳ ಅರಿತಿದ್ದ ಸಂದೀಪ್‍ನನ್ನು ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಹಾಗೂ ಪತ್ನಿ ಕೆಲಸಕ್ಕೆ ರಾಜಿನಾಮೆ ನೀಡಿ ಮನೆಗೆ ಹೋಗುವಂತೆ ಹೇಳಿದ್ದರು. ಅಲ್ಲದೇ ಮೊಬೈಲ್ ಫೋನ್ ಕೂಡಾ ಸ್ವಿಚ್ ಆಫ್ ಮಾಡಿಕೊಳ್ಳಲು ಹೇಳಿದ್ದರು ಎನ್ನುವ ಸ್ಪೋಟಕ ಮಾಹಿತಿ ಎಸ್‍ಐಟಿ ಚಾರ್ಜ್‍ಶೀಟ್‍ನಲ್ಲಿ ಬಯಲಾಗಿದೆ.
ಈ ಮೂಲಕ ಮಗನ ಅಕ್ರಮ ಚಟುವಟಿಕೆಗಳ ಬಗ್ಗೆ ಲೋಕಾಯುಕ್ತರಿಗೆ ಮಾಹಿತಿ ಇತ್ತು ಎನ್ನುವ ಸ್ಪಷ್ಟತೆ ಚಾರ್ಜ್ ಶೀಟ್‍ನಿಂದ ಕಂಡು ಬಂದಿದೆ. ಅಶ್ವಿನ್, ವಿ.ಭಾಸ್ಕರ್, ಸೈಯ್ಯದ್ ರಿಯಾಜ್ ಸೇರಿದಂತೆ ಆರೋಪಿಗಳು ಹಲವು ಅಧಿಕಾರಿಗಳನ್ನು ವಸತಿಗೃಹಕ್ಕೆ ಕರೆಸಿಕೊಂಡು ಬೆದರಿಸಿ ಸುಲಿಗೆ ಮಾಡುತ್ತಿದ್ದರು. ಲೋಕಾಯುಕ್ತರು ಕೇಂದ್ರ ಸ್ಥಾನದಲ್ಲಿ ಇಲ್ಲದ ವೇಳೆ ವಸತಿಗೃಹಕ್ಕೆ ಬರುತ್ತಿದ್ದ ಅಧಿಕಾರಿಗಳು ನೀಡುತ್ತಿದ್ದ ಕಪ್ಪ ಕಾಣಿಕೆಯನ್ನು ಸಂದೀಪ್ ಪಡೆದು ಅಶ್ವಿನ್ ಅವರ ಬೆಡ್ ರೂಮಿನಲ್ಲಿ ಇಡುತ್ತಿದ್ದ. ಹೀಗಾಗಿ, ಸಂದೀಪ್ ಬಳಿ ಎಲ್ಲಾ ಮಾಹಿತಿಯು ಇತ್ತು. ಮಗನ ವಿರುದ್ಧಎಫ್ಐಆರ್ ದಾಖಲಾಗುತ್ತಿದ್ದಂತೆ ಲೋಕಾಯುಕ್ತ ದಂಪತಿ ರಜೆ ಮೇಲೆ ಹೋಗು, ಅಲ್ಲದೇ 15 ದಿನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಳ್ಳುವಂತೆ ಸಂದೀಪ್‍ಗೆ ಹೇಳಿದ್ದರು. ಕೊನೆಗೆ ಕೆಲಸಕ್ಕೆ ರಾಜಿನಾಮೆ ನೀಡು ಎಂದಿದ್ದರು.