ಬಡ್ತಿ ವಿವಾದ: ತಿಂಗಳಲ್ಲಿ ಪರಿಹಾರಕ್ಕೆ ನಿರ್ದೇಶನ

ಕರ್ನಾಟಕ ಲೋಕಸೇವಾ ಆಯೋಗದಿಂದ 1998 ರಲ್ಲಿ ನೇಮಕಗೊಂಡ ಕೆಎಎಸ್ ಅಧಿಕಾರಿಗಳ ಪೈಕಿ 13 ಮಂದಿಗೆ ಐಎಎಸ್‍ಗೆ ಬಡ್ತಿ ನೀಡುವ ಸಂಬಂಧ ಇನ್ನು ನಾಲ್ಕು ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ)ಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ಕರ್ನಾಟಕ ಲೋಕ ಸೇವಾ ಆಯೋಗ (ಸಂಗ್ರಹ ಚಿತ್ರ)
ಕರ್ನಾಟಕ ಲೋಕ ಸೇವಾ ಆಯೋಗ (ಸಂಗ್ರಹ ಚಿತ್ರ)
Updated on: 

ನವದೆಹಲಿ: ಕರ್ನಾಟಕ ಲೋಕಸೇವಾ ಆಯೋಗದಿಂದ 1998 ರಲ್ಲಿ ನೇಮಕಗೊಂಡ ಕೆಎಎಸ್ ಅಧಿಕಾರಿಗಳ  ಪೈಕಿ 13 ಮಂದಿಗೆ ಐಎಎಸ್‍ಗೆ ಬಡ್ತಿ ನೀಡುವ ಸಂಬಂಧ ಇನ್ನು ನಾಲ್ಕು  ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ)ಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

ಈ ಸಂಬಂಧ ನಿರ್ಧಾರ ಕೈಗೊಳ್ಳುವಾಗ ಕರ್ನಾಟಕ ಹೈಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿರುವ ನಿರ್ದೇಶನದ ಪ್ರಭಾವಕ್ಕೆ ಒಳಗಾಗ ಬಾರದು ಎಂದು ಮುಖ್ಯ ನ್ಯಾಯಮೂರ್ತಿ   ಎಚ್.ಎಲ್.ದತ್ತು ನೇತತ್ವದ ನ್ಯಾಯಪೀಠ ಸೂಚಿಸಿದೆ. ಲೋಕಸೇವಾ ಆಯೋಗದಿಂದ 1998ರಲ್ಲಿ ನೇಮಕಗೊಂಡ ಅಧಿಕಾರಿಗಳು ಕರ್ನಾಟಕದ ಹೈ ಕೋರ್ಟಲ್ಲಿ ಅರ್ಜಿಸಲ್ಲಿಸಿ ಬಡ್ತಿ ನೀಡುವ  ಪ್ರಕ್ರಿಯೆ ತ್ವರಿತಗೊಳಿಸುವಂತೆ ಸಿಎಟಿಗೆ ನಿರ್ದೇಶನ ನೀಡಲು ಕೋರಿದ್ದರು. ಅರ್ಜಿ ಪರಿಗಣಿಸಿದ್ದ ಹೈಕೋರ್ಟ್ 1998ರಲ್ಲಿ ನೇಮಕಗೊಂಡವರ ಪೈಕಿ ಅರ್ಹರಿಗೆ ಬಡ್ತಿ ನೀಡುವ ಪ್ರಕ್ರಿಯೆ ವಿಳಂಬ  ಮಾಡಬಾರದು ಎಂದು ಸಿಎಟಿಗೆ ಆದೇಶ ನೀಡಿತ್ತು.

ಹೈಕೋರ್ಟ್‍ನ ಈ ಆದೇಶವನ್ನು ಲೋಕಸೇವಾ ಆಯೋಗದಿಂದ 1998ರಲ್ಲಿ ಪರಿಷ್ಕೃತ ಪಟ್ಟಿಯಡಿ ನೇಮಕಗೊಂಡ ಅಧಿಕಾರಿಗಳು ಸುಪ್ರೀಂ ಕೋರ್ಟ ನಲ್ಲಿ ಪ್ರಶ್ನಿಸಿದ್ದರು. ಹೈಕೋರ್ಟ್  ಆದೇಶದಂತೆ ಐಎಎಸ್‍ಗೆ ಬಡ್ತಿ ನೀಡಿದರೆ, ಪರಿಷ್ಕೃತ ಪಟ್ಟಿಯಲ್ಲಿ ನೇಮಕವಾಗಿರುವವರಿಗೆ ಅನ್ಯಾಯವಾಗುತ್ತದೆ ಎಂದು ನ್ಯಾಯಪೀಠದ ಮುಂದೆ ಮನವಿ ಸಲ್ಲಿಸಿದ್ದರು. ಸೋಮವಾರ  ಅರ್ಜಿದಾರರು ಮತ್ತು ಪ್ರತಿವಾದಿಗಳ ವಾದ ಆಲಿಸಿದ ನ್ಯಾಯಪೀಠವು, ಸಿಎಟಿ ಅರ್ಜಿದಾರರ ಅಹವಾಲು ಆಲಿಸಿ, ಅರ್ಹತೆ ಆಧಾರದ ಮೇಲೆ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಬೇಕು ಮತ್ತು 4 ವಾರಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸೂಚಿಸಿತು.

ಸಿಎಟಿ ಆದೇಶದಿಂದ ತೃಪ್ತಿಯಾಗದಿದ್ದರೆ ಮತ್ತೆ ನ್ಯಾಯಪೀಠಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಸೂಚಿಸಿತು. ಕೆಪಿಎಸ್‍ಸಿಯಲ್ಲಿ ಹಗರಣ ಸಾಬೀತಾದ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್  2014 ನ.12 ರಂದು ಆದೇಶ ನೀಡಿ, 24 ಗಂಟೆಯೊಳಗೆ ಪರಿಷ್ಕೃತ ಪಟ್ಟಿ ಪ್ರಕಟಿಸುವಂತೆ ಆಯೋಗಕ್ಕೆ ಆದೇಶ ನೀಡಿತ್ತು. ಪರಿಷ್ಕೃತ ಪಟ್ಟಿ ಪ್ರಕಟವಾದಾಗ ಎ ವರ್ಗದಲ್ಲಿದ್ದವರು ಬಿ ವರ್ಗಕ್ಕೂ  ಮತ್ತು ಬಿ ವರ್ಗದಲ್ಲಿದ್ದವರೂ ಎ ವರ್ಗಕ್ಕೂ ಸ್ಥಳಾಂತರಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com