

ಕಲಬುರ್ಗಿ: ಕಳಸಾ-ಬಂಡೂರಿ ನಾಲಾ ಯೋಜನೆಗಾಗಿ ವಿವಿಧ ಕನ್ನಡಪರ ಸಂಘಟನೆಗಳು ಶನಿವಾರ ಕರೆ ನೀಡಿರುವ ಕರ್ನಾಟಕ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನಾ ರ್ಯಾಲಿ ಫ್ರೀಡಂ ಪಾರ್ಕ್ ತಲುಪಿದೆ. ಸಾವಿರಾರು ಕಾರ್ಯಕರ್ತರು ಸೇರಿ ಕನ್ನಡಿಗರ ಒಗ್ಗಟ್ಟಿನ ಪ್ರದರ್ಶನ ಮಾಡುತ್ತಿದ್ದಾರೆ.
ಹೈದರಾಬಾದ್-ಕರ್ನಾಟಕ ಜಿಲ್ಲೆಗಳಲ್ಲಿ ಬಂದ್ ಗೆ ಸಾಧಾರಣ ಪ್ರತಿಕ್ರಿಯೆ ಕಂಡುಬರುತ್ತಿದೆ. ಕಲಬುರ್ಗಿ, ಯಾದಗಿರಿ, ಬೀದರ್, ಬಳ್ಳಾರಿ ಜಿಲ್ಲೆಗಳಲ್ಲಿ ಬಂದ್ ಗೆ ಕಡಿಮೆ ಪ್ರತಿಕ್ರಿಯೆ ಕಂಡುಬರುತ್ತಿದ. ಈಶಾನ್ಯ ಭಾಗಗಳ ರಾಜ್ಯ ರಸ್ತೆ ಸಾರಿಗೆ ಬಸ್ ಗಳನ್ನು ಮತ್ತು ಶಾಲಾ-ಕಾಲೇಜುಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ನಿರ್ಬಂಧಿಸಲಾಗಿದ್ದು, ಉಳಿದೆಲ್ಲ ಚಟುವಟಿಕೆಗಳು ಈ ಜಿಲ್ಲೆಗಳಲ್ಲಿ ಎಂದಿನಂತೆ ನಡೆಯುತ್ತಿವೆ. ಕಲಬುರ್ಗಿ, ಯಾದಗಿರಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಅಂಗಡಿ, ಹೊಟೇಲ್ ಮತ್ತು ವಾಣಿಜ್ಯ ಕೇಂದ್ರಗಳು ತೆರೆದಿವೆ. ಆದರೆ ಬಳ್ಳಾರಿ ಜಿಲ್ಲೆಯಲ್ಲಿ ಮಾತ್ರ ಬಂದ್ ಆಗಿವೆಯ ಇದುವರೆಗೆ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.
ಉತ್ತರ ಕರ್ನಾಟಕ, ಮೈಸೂರು, ಬೆಂಗಳೂರುಗಳಲ್ಲಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಯೂ ಬಂದ್ ಅಷ್ಟೊಂದು ಪರಿಣಾಮ ಬೀರಿದಂತೆ ಕಂಡುಬರುತ್ತಿಲ್ಲ. ಸಾರಿಗೆ, ಸಂಚಾರ, ವ್ಯಾಪಾರ-ಚಟುವಟಿಕೆಗಳು ಎಂದಿನಂತೆ ಮುಂದುವರಿದಿವೆ.
ಕಳಸಾ-ಬಂಡೂರಿ ನಾಲಾ ಯೋಜನೆಯನ್ನು ಶೀಘ್ರವೇ ಜಾರಿಗೊಳಿಸುವಂತೆ ಮತ್ತು ಮಳೆಯ ಕೊರತೆಯಿಂದ ಬೆಳೆದ ಬೆಳೆಗಳನ್ನು ಕಳೆದುಕೊಂಡು ತೀವ್ರ ನಷ್ಟ ಅನುಭವಿಸಿದ ರೈತರಿಗೆ ಸರ್ಕಾರ ಪರಿಹಾರ ನೀಡುವಂತೆ ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು ಮತ್ತು ರೈತರು ಇಂದು 12 ಗಂಟೆಗಳ ರಾಜ್ಯ ಬಂದ್ ಗೆ ಕರೆ ನೀಡಿದ್ದವು. ಈ ವರ್ಷ ಸಾಲದ ಬಾಧೆಯಿಂದ ಸಾವಿಗೀಡಾದ ರೈತರ ಕುಟುಂಬದವರಿಗೆ ಪರಿಹಾರ ನೀಡಬೇಕೆಂದೂ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸುತ್ತಿವೆ.