ಮಂಗಳೂರು: ತಮ್ಮ ಪುತ್ರನ ಕಂಪನಿಗೆ ಲ್ಯಾಗ್ ಗುತ್ತಿಗೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅವರು, ಅಪ್ಪ, ಮಗ ಇಬ್ಬರೂ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಿಎಂ ಪುತ್ರ ವ್ಯಾಮೋಹದಿಂದ ಜನರ ಮುಂದೆ ಮಾನ ಹರಾಜಾಗಿದೆ. ಗುತ್ತಿಗೆ ವಿಚಾರದಲ್ಲಿ ಸಿಎಂ ಪುತ್ರ ಮಾಡಿದ್ದು ಸರಿಯಲ್ಲ. ಹೀಗಾಗಿ ಈ ಕೂಡಲೇ ಇಬ್ಬರು ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದಿದ್ದಾರೆ.
ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ರಾಜ್ಯ ಸರ್ಕಾರದ ಮಾನ ಹೋಗಿದೆ. ಈ ಪುತ್ರನ ವಿಚಾರದಲ್ಲಾಗದರೂ ಸಿಎಂ ಕ್ಷಮೆಯಾಚಿಸಲು. ಈ ಮೂಲಕ ಸಿಎಂ ತಮ್ಮ ಮಾನ ಉಳಿಸಿಕೊಳ್ಳಲಿ ಎಂದು ಜನಾರ್ದನ ಪೂಜಾರಿ ಅವರು ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ಕಿರಿಯ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಮಾಲೀಕತ್ವದ ಮ್ಯಾಟ್ರಿಕ್ಸ್ ಇಮೇಂಜಿಂಗ್ ಸಲ್ಯೂಷನ್ಸ್ ಕಂಪನಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಲ್ಯಾಬ್ ಆರಂಭಿಸಲು ಗುತ್ತಿಗೆ ನೀಡಲಾಗಿದೆ. ಆದರೆ ಸಿಎಂ ಹಾಗೂ ಸಚಿವ ಸಂಪುಟದ ಸದಸ್ಯರ ಕುಟುಂಬ ಸರ್ಕಾರದೊಂದಿಗೆ ಯಾವುದೇ ಉದ್ಯಮದಲ್ಲಿ ಪಾಲ್ಗೊಳ್ಳುವುದಾಗಲಿ ಅಥವಾ ಸರ್ಕಾರಕ್ಕೆ ಯಾವುದೇ ಸೇವೆ ಒದಗಿಸುವಂತಿಲ್ಲ ಎಂಬ ನೀತಿ ಸಂಹಿತೆ ಇದೆ. ಆದರೆ ನಿಯಮ ಮೀರಿ ಸಿಎಂ ಪುತ್ರನ ಸಂಸ್ಥೆಗೆ ಡಯಾಗ್ನೋಸ್ಟಿಕ್ ಘಟಕ ತೆರೆಯಲು ಅನುಮತಿ ನೀಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಯತೀಂದ್ರ ಅವರು ಕಂಪನಿಯಿಂದ ಹೊರ ಬಂದಿದ್ದಾರೆ.